ರಾಜ್ಯದಲ್ಲಿ ವರುಣನ ಆರ್ಭಟಕ್ಕೆ 12 ದಿನಗಳಲ್ಲಿ 21 ಮಂದಿ ಸಾವು: ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಉತ್ತರಾ ಮಳೆಯ ಆರ್ಭಟ ಮುಂದುವರೆದಿದ್ದು, 10 ಜಿಲ್ಲೆಗಳಲ್ಲಿ ಮಂಗಳವಾರ ಕೂಡ ಭಾರೀ ಮಳೆ ಸುರಿದೆ. ಅಕ್ಟೋಬರ್ ನಲ್ಲಿ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿದಿದ್ದು, 2-3 ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಜಿಲ್ಲೆಗಳಲ್ಲಿ ಶೇ.30-50ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಮಂಗಳವಾರ ರಾತ್ರಿ ವಿವಿಧ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಲ್ಲಿವರೆಗೂ ಮಳೆ ಸಂಬಂಧಿ ಅನಾಹುತಗಳಲ್ಲಿ 12 ದಿನಗಳಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮನೆ ಕುಸಿದು 7 ಮಂದಿ ಸಾವನ್ನಪ್ಪಿದ್ದವರೂ ಕೂಡ ಸೇರಿದ್ದಾರೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ರೂ.10 ಸಾವಿರ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
2,500 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು ಮೌಲ್ಯಮಾಪನ ನಡೆಸಿದ ನಂತರ ಪರಿಹಾರವನ್ನು ನೀಡಲಾಗುವುದು. ಜೂನ್ ನಿಂದ ಇಲ್ಲಿ ವರೆಗೂ 4.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಮಳೆಯಿಂದ ಹಾನಿಯಾಗಿದೆ. 1.17 ಲಕ್ಷ ರೈತರಿಗೆ ರೂ.105 ಕೋಟಿ ಪರಿಹಾರ ನೀಡಲಾಗಿದೆ. ತುರ್ತು ಬಳಕೆಗೆ ಜಿಲ್ಲಾಧಿಕಾರಿಗಳ ಬಳಿ ರೂ.734 ಕೋಟಿ ಹಣ ಕೂಡ ಇದೆ. 2,500 ಮನೆಗಳು ಮಳೆಯಿಂದಾಗಿ ಹಾನಿಯಾಗಿವೆ.
ಮಳೆಯಿಂದ ಮನೆ ಕಳೆದುಕೊಂಡವರಿಗೆ ಎಂದಿನಂತೆ ರೂ.5 ಲಕ್ಷ ಪರಿಹಾರ ನೀಡಲಾಗುವುದು. 2,300 ವಿದ್ಯುತ್ ಕಂಬಗಳು, ಸೇತುವೆ, ರಸ್ತೆ ಮತ್ತು ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ. ಹಾನಿ ಕುರಿತು ಪರಿಶೀಲನೆ ನಡೆಸಿ ಪರಿಹಾರ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ