ಗಡಿಕೇಶ್ವಾರದಲ್ಲಿ ಮತ್ತೆ ಭೂಕಂಪನ: ಪುರುಷರು, ಮಹಿಳೆಯರಿಗೆ ಆಶ್ರಯ ಕೇಂದ್ರ ನಿರ್ಮಾಣ

ಕಳೆದ ಕೆಲ ವಾರಗಳಿಂದ ಭೂಕಂಪನದಿಂದಾಗಿಯೇ ಸುದ್ದಿಗೆ ಗ್ರಾಸವಾಗುತ್ತಿರುವ ಗಡಿಕೇಶ್ವಾರದಲ್ಲಿ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನ
ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನ

ಕಲಬುರಗಿ: ಕಳೆದ ಕೆಲ ವಾರಗಳಿಂದ ಭೂಕಂಪನದಿಂದಾಗಿಯೇ ಸುದ್ದಿಗೆ ಗ್ರಾಸವಾಗುತ್ತಿರುವ ಗಡಿಕೇಶ್ವಾರದಲ್ಲಿ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕಲಬುರಗಿ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರದಲ್ಲಿ‌ ಇಂದು ಅಂದರೆ ಶನಿವಾರ ಬೆಳಗ್ಗೆ 11.20ರ ಸುಮಾರಿನಲ್ಲಿ ಭೂಮಿಯಿಂದ ಜೋರು ಸದ್ದು ಕೇಳಿಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಆತಂಕದಿಂದ ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ. ಸತತವಾಗಿ ಇಲ್ಲಿ ಭೂಮಿ ಕಂಪಿಸುತ್ತಿದ್ದು ಇದರಿಂದ ಇಲ್ಲಿ ನಿವಾಸಗಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. 

ಕಲಬುರಗಿಯಿಂದ 75 ಕಿಲೋಮೀಟರ್ ದೂರ ಇರುವ ಗ್ರಾಮ ಗಡಿಕೇಶ್ವಾರ. ಇಲ್ಲಿನ ಜನರ ಬದುಕು ಈಗ ಅಕ್ಷರಶಃ ಬೀದಿಗೆ ಬಂದಿದೆ. ಪದೇ ಪದೇ ಭೂಮಿ ಕಂಪಿಸಿದ ಅನುಭವವಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕದಿಂದ ಊರು ತೊರೆಯುತ್ತಿದ್ದಾರೆ. ಈಗಾಗಲೇ ಇಲ್ಲಿನ ಶೇ.75 ರಷ್ಟು ಮಂದಿ ನಿವಾಸಿಗಳು ಗ್ರಾಮ ತೊರೆದಿದ್ದು, ಅಳಿದುಳಿದ ನಿವಾಸಿಗಳು ಬೀದಿಗಳಲ್ಲೇ ಜೀವನ ಸಾಗಿಸುವಂತಾಗಿದೆ. 

ಗಡಿಕೇಶ್ವಾರ ಗ್ರಾಮದಲ್ಲಿ ಸುಮಾರು 800 ಮನೆಗಳಿದ್ದು, ಭೂಕಂಪನದಿಂದಾಗಿ ಇಲ್ಲಿನ ದೇವಾಲಯವೂ ಸೇರಿದಂತೆ ಬಹುತೇಕ ಮನೆಗಳು ಬಿರುಕು ಬಿಟ್ಟಿವೆ. ಗೋಡೆಗಳು ಕುಸಿದಿದ್ದು, ಯಾವಾಗ ಯಾವ ಮನೆ ಕುಸಿಯುತ್ತದೆಯೋ ಎಂಬ ಭೀತಿಯಲ್ಲೇ ಗ್ರಾಮಸ್ಥರು ಕಾಲ ನೂಕುವಂತಾಗಿದೆ. 

ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ, ಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ: ಉಸ್ತುವಾರಿ ಜಿಲ್ಲಾಧಿಕಾರಿ
ಇನ್ನು ಮತ್ತೆ ಭೂಕಂಪನದ ವಿಚಾರ ತಿಳಿಯುತ್ತಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಂಚೋಳಿ ಉಸ್ತುವಾರಿ ಜಿಲ್ಲಾಧಿಕಾರಿ ಅಂಜುಮ್ ತಬ್ಸಮ್ ಅವರು, ಸುಮಾರು 2 ಸೆಕೆಂಡ್ ಭೂಮಿ ಕಂಪಿಸಿತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲಾಗಿಲ್ಲ. ಹೀಗಾಗಿ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ. ತಾಲೂಕು ಆಡಳಿತವು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಅಗ್ನಿಶಾಮಕ ವಾಹನಗಳು, ಜೆಸಿಬಿ ಯಂತ್ರಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಇರಿಸಿದೆ ಎಂದು ಹೇಳಿದರು.

ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೆಡ್ ಗಳ ನಿರ್ಮಾಣ
ಅಂತೆಯೇ ಗ್ರಾಮಸ್ಥರು ಯಾವುದೇ ಭಯವಿಲ್ಲದೆ ಮಲಗಲು ಅನುಕೂಲವಾಗುವಂತೆ ಎರಡು ದೊಡ್ಡ ಶೆಡ್‌ಗಳನ್ನು ನಿರ್ಮಿಸಲಾಗಿದೆ, ಅವುಗಳಲ್ಲಿ ಒಂದು ಪುರುಷರಿಗಾಗಿ ಮತ್ತು ಇನ್ನೊಂದು ಮಹಿಳೆಯರಿಗಾಗಿ. ಇದಲ್ಲದೇ ಕಾಳಜಿ ಕೇಂದ್ರದಲ್ಲಿ ದಿನಕ್ಕೆ ಎರಡು ಬಾರಿ ಆಹಾರವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಇನ್ನು ಭೂಕಂಪನ ಪೀಡಿತ ಗ್ರಾಮದಲ್ಲಿ ಗ್ರಾಮಸ್ಥರು ಗ್ರಾಮ ತೊರೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸ್ಥಳೀಯರಿಗಾಗಿ ಎರಡು ಪ್ರತ್ಯೇಕ ಆಶ್ರಯ ಕೇಂದ್ರ ಅಥವಾ ಶೆಡ್ ಗಳನ್ನು ನಿರ್ಮಿಸಿದೆ. ಈ ಶೆಡ್ ಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಆಶ್ರಯ ನೀಡಲಾಗಿದೆ. ಈ ಹಿಂದೆ ಇದೇ ಗಡಿಕೇಶ್ವಾರ ಗ್ರಾಮದ ಗ್ರಾಮಸ್ಥರು ಆಶ್ರಯ ಕೇಂದ್ರ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಅಲ್ಲದೆ ಗ್ರಾಮಸ್ಥರು ಬೆಡ್ ಶೀಟ್ ಮತ್ತು ಕಂಬಳಿಗಾಗಿ ಮನವಿ ಮಾಡಿದ್ದು. ಈ ಸಂಬಂಧ ಶೀಘ್ರದಲ್ಲೇ ಕ್ರಮಕೈಗೊಳ್ಳುತ್ತೇವೆ ಎಂದು ಜಿಲ್ಲಾಡಳಿತ ಹೇಳಿದೆ. 

ಕಳೆದ ಮಂಗಳವಾರ ಉಪ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಈ ವೇಳೆ ಸೇಡಂ ಶಾಸಕ ರಾಜ್ ಕುಮಾರ್ ಪಾಟೀಲ್ ತೆಲ್ಕುರ್, ಕಲಬರಗಿ ಸಂಸದ ಉಮೇಶ್ ಜಾದವ್ ಅವರು ಕೂಡ ಗ್ರಾಮಕ್ಕೆ ಆಗಮಿಸಿ ತಜ್ಞರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಎಲ್ಲ ಅಧಿಕಾರಿಗಳು ಮತ್ತು ನಾಯಕರು ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಿದರು. ಈ ವೇಳೆ ಗ್ರಾಮಸ್ಥರೊಂದಿಗೆ ಮಾತನಾಡಿದ ಸಂಸದ ಉಮೇಶ್ ಜಾದವ್, ಸರ್ಕಾರ ಈ ಸಂಬಂಧ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಶೀಘ್ರದಲ್ಲೇ ತಜ್ಞರ ತಂಡದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದು ಹೇಳಿದರು. 

ಮೂಲಗಳ ಪ್ರಕಾರ ಲೋಕೋಪಯೋಗಿ ಇಲಾಖೆಯ ಇಒಂದು ತಂಡ ಈಗಾಗಲೇ ಗಡಿಕೇಶ್ವಾರದಲ್ಲಿ ಮನೆಗಳ ಸರ್ವೇ ಕಾರ್ಯ ಆರಂಭಿಸಿದ್ದು, ಇದರಿಂದ ಕುಟುಂಬಕ್ಕೆ ಒಂದರಂತೆ ಪ್ರತ್ಯೇಕ ಶೆಡ್ ಗಳ ನಿರ್ಮಾಣಕ್ಕೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ಮಾರ್ಗದರ್ಶಿ ಫಲಕಗಳ ಅಳವಡಿಕೆ
ಅಂತೆಯೇ ಅಧಿಕಾರಿಗಳು ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಮಾರ್ಗದರ್ಶಿ ಫಲಕಗಳ ಅಳವಡಿಸಿದ್ದು, ಇದರಲ್ಲಿ ಭೂಕಂಪನ ಸಂಭವಿಸಿದಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಕುರಿತು ಮಾರ್ಗದರ್ಶನ ಮಾಡಲಾಗಿದೆ.

ಗ್ರಾಮಕ್ಕೆ ವಾಪಸ್ಸಾದ ಕೆಲ ಗ್ರಾಮಸ್ಥರು
ಈ ಬೆಳವಣಿಗೆ ಬೆನ್ನಲ್ಲೇ ಮಂಗಳವಾರ ಊರು ತೊರೆದಿದ್ದವರ ಪೈಕಿ ಕೆಲ ಗ್ರಾಮಸ್ಥರು ಊರಿಗೆ ವಾಪಸಾಗಿದ್ದಾರೆ. ದಸರಾ ನಿಮಿತ್ತ ಮನೆ ಮುಂದೆ ದೀಪ ಹಚ್ಚಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. 

ಗ್ರಾಮದಲ್ಲಿ ಮುಂದುವರೆದ ಅಧ್ಯಯನ
ಇನ್ನು ಗಡಿಕೇಶ್ವಾರ ಗ್ರಾಮದಲ್ಲಿ ನಿರಂತರ ಭೂಕಂಪನ ಹಾಗೂ ಭೂಮಿಯಿಂದ ಸದ್ದು ಕೇಳಿ ಬರುತ್ತಿದ್ದು ಇವುಗಳು ಭೂಕಂಪದ ಪೂರ್ವ ಕಂಪನಗಳೆ ಅಥವಾ ಲಘು ಕಂಪನ ಎಂಬುದು ಪತ್ತೆ ಹಚ್ಚಲು ವಿಜ್ಞಾನಿಗಳು ಅಧ್ಯಯನ‌ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಶನಿವಾರ ಹೈದರಾಬಾದ್‌ನ ರಾಷ್ಟ್ರೀಯ ಭೂಭೌತವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ. ಭಾನುವಾರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳ ತಂಡ ಕೂಡ ಭೇಟಿ ನೀಡಿ ಅಧ್ಯಯನ ಮುಂದುವರೆಸುವರು ಎಂದು ತಹಶೀಲ್ದಾರ್‌ ಅಂಜುಮ್ ತಬಸ್ಸುಮ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com