300 ಕಾರ್ನರ್ ನಿವೇಶನಗಳ ಹರಾಜಿಗೆ ಬಿಡಿಎ ಮುಂದು: ವಿವರ ಹೀಗಿದೆ...

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶೀಘ್ರವೇ 300 ಕಾರ್ನರ್ ಸೈಟ್ ಗಳನ್ನು ಹರಾಜು ಹಾಕುವುದಕ್ಕೆ ಮುಂದಾಗಿದೆ. 
ಬಿಡಿಎ ಕೆಂಪೇಗೌಡ ಲೇಔಟ್
ಬಿಡಿಎ ಕೆಂಪೇಗೌಡ ಲೇಔಟ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶೀಘ್ರವೇ 300 ಕಾರ್ನರ್ ಸೈಟ್ ಗಳನ್ನು ಹರಾಜು ಹಾಕುವುದಕ್ಕೆ ಮುಂದಾಗಿದೆ. 

ಈಗಾಗಲೇ ಹರಾಜು ಹಾಕಲಾಗಿರುವ 1,800 ಸೈಟ್ ಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬಿಡಿಎಯಲ್ಲಿ ಸುಮಾರು 4,500 ಕಾರ್ನರ್ ನಿವೇಶನಗಳಿದ್ದು ಒಳ್ಳೆಯ ಗಾಳಿ ಬೆಳಕು ಹಾಗೂ ವಾತಾವರಣ ಇರುವುದರಿಂದ ಹೆಚ್ಚಿನ ಬೇಡಿಕೆ ಇದ್ದು ಸಾಮಾನ್ಯ ನಿವೇಶನಕ್ಕಿಂತಲೂ ಶೇ.25 ರಷ್ಟು ಹೆಚ್ಚು ಆದಾಯ ಲಭ್ಯವಾಗುತ್ತದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, 300 ಕಾರ್ನರ್ ಸೈಟ್ ಗಳಿಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.  18 ತಿಂಗಳ ಹಿಂದೆ ಈ ನಿವೇಶನಗಳನ್ನು ಕನ್ವರ್ಟ್ ಮಾಡಲಾಗಿತ್ತು.  ಹಂತ ಹಂತವಾಗಿ ಈ ಪ್ರಕ್ರಿಯೆಗಳನ್ನು ನಡೆಸಿದ್ದು, ಈ ವರೆಗೂ 1,827 ಕಾರ್ನರ್ ಸೈಟ್ ಗಳನ್ನು ಹರಾಜು ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಬಿಡಿಎಗೆ ಒಟ್ಟಾರೆ 1,680 ಕೋಟಿ ರೂಪಾಯಿಗಳ ಆದಾಯ ಬಂದಿದೆ. ಆದರೆ ಅಂದಾಜು ಇದ್ದದ್ದು ಕೇವಲ 1,075 ಕೋಟಿ ರೂಪಾಯಿಗಳು ಎಂದು ಅಧಿಕಾರಿಗಳು ವಿವರಿಸಿದ್ದಾರೆ. 

ಯೋಜಿತ ಆದಾಯಕ್ಕಿಂತಲೂ ಶೇ. 56.3 ರಷ್ಟು ಹೆಚ್ಚು ಆದಾಯವನ್ನು ಬಿಡಿಎ ಗಳಿಸಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಸಂಸ್ಥೆಗೆ ಈ ಸೈಟ್ ಗಳಿಂದ ಉತ್ತಮ ಲಾಭ ಬಂದಿದ್ದು ತನ್ನ ಲೇಔಟ್ ಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಕ್ಕೆ ಸಹಕಾರಿಯಾಗಲಿದೆ.

ಬಿಡಿಎ ಕಾರ್ನರ್ ಸೈಟ್ ಗಳು ಅಂಜನಾಪುರ, ಬನಶಂಕರಿ 6 ನೇ ಹಂತ, ಬಿಟಿಎಂ ಲೇಔಟ್ 4, 5ನೇ ಹಂತ ಹಾಗೂ ಎನ್ ಜಿಇಎಫ್ ನ ಈಸ್ಟ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್, ಜ್ಞಾನ ಭಾರತಿ ಮತ್ತು ರಾಜಾಜಿನಗರ ಮತ್ತು ಇತರ ಕೆಲವು ಸ್ಥಳಗಳಲ್ಲಿ ಲಭ್ಯವಿದೆ.

ಈ ವರ್ಷ ಜೂನ್ ನಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಪರಿಶೀಲನೆ ಸಭೆಯಲ್ಲಿ ಹರಾಜು ಪ್ರಕ್ರಿಯೆಯನ್ನು ವೇಗಗತಿಯಲ್ಲಿ ನಡೆಸಲು ಸೂಚಿಸಿದ್ದರು. ಈ ಬಾರಿಯೂ ಕಳೆದ ಬಾರಿಯಂತೆ ನಿರೀಕ್ಷೆಗಿಂತಲೂ ಹೆಚ್ಚಿನ ಲಾಭ ಬರಲಿದೆ ಎಂದು ಬಿಡಿಎ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com