ಬೆಂಗಳೂರು: ನಿನ್ನೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ದೇಶ ವಿದೇಶಗಳ ಸುದ್ದಿ ವಾಹಿನಿಗಳಲ್ಲೂ ಪ್ರಸಾರವಾಗಿದ್ದು, ಬಿಬಿಸಿ ವರ್ಲ್ಡ್ ನ್ಯೂಸ್ ಪುನೀತ್ ಸಾವು ಮತ್ತು ಅಭಿಮಾನಿಗಳ ಆಕ್ರಂದನದ ಬಗ್ಗೆ ವರದಿ ಮಾಡಿದೆ.
ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಓದಿದ ನಿರೂಪಕಿ, ಈ ದುಃಖವನ್ನು ಅವರ ಕುಟುಂಬ ಹೇಗೆ ಭರಿಸುತ್ತಿದೆ ಎಂದು ಲಂಡನ್ನಿನ ಸಿನಿಮಾ ವಿಮರ್ಶಕರನ್ನು ಕೇಳುತ್ತಾರೆ. ಈ ವೇಳೆ ಮಾತನಾಡಿದ ಮಹಿಳಾ ಸಿನಿಮಾ ವಿಮರ್ಶಕರೊಬ್ಬರು, 'ನಾನು ಅವರ ಅಣ್ಣ ಖ್ಯಾತ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದೆ. ಅವರ ಕುಟುಂಬ, ನಾನು ಸೇರಿದಂತೆ ಎಲ್ಲರೂ ಆಘಾತಕ್ಕೊಳಗಾಗಿದ್ದೇವೆ. ನಿನ್ನೆಯಷ್ಟೇ ಅಣ್ಣ ಮತ್ತು ಯಶ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ಬೆಳಗ್ಗೆ(ಅ.29) ಪುನೀತ್ ಅವರು ಇನ್ನಿಲ್ಲ ಎಂಬ ಸುದ್ದಿ ಎಲ್ಲರಿಗೂ ದಿಗ್ಭ್ರಮೆ ಹುಟ್ಟಿಸಿದೆ. ಅವರಿಗಿನ್ನೂ ಕೇವಲ 46 ವರ್ಷ ವಯಸ್ಸಾಗಿತ್ತು. ಪ್ರತಿಭಾನ್ವಿತ ನಟರಾಗಿದ್ದ ಅವರು 29 ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಸಾವಿರಾರು ಸಂಖ್ಯೆಯ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ" ಎಂದು ವಿವರಿಸಿದರು.
ಇದನ್ನೂ ಓದಿ: 'ಅಪ್ಪು' ಇನ್ನಿಲ್ಲ: ನಾಳೆ ಬೆಳಗ್ಗೆ 6ಕ್ಕೆ ಪುನೀತ್ ಪಾರ್ಥೀವ ಶರೀರದ ಮೆರವಣಿಗೆ ಆರಂಭ, 10.30ರೊಳಗೆ ಅಂತ್ಯಕ್ರಿಯೆ
ಹೌದು, ಆಸ್ಪತ್ರೆಗಳ ಮುಂದೆ ಜಮಾಯಿಸಿರುವ ಜನರನ್ನು ನೋಡಿದರೆ ಅವರ ಪ್ರಭಾವ ಹೇಗಿತ್ತು ಎಂಬುದು ಗೊತ್ತಾಗುತ್ತದೆ ಎಂದು ನಿರೂಪಕಿ ಹೇಳುತ್ತಾರೆ. ಈ ವೇಳೆ ಅಭಿಮಾನಿಗಳ ಆಕ್ರಂಧನದ ವಿಡಿಯೋ ತೋರಿಸಲಾಗುತ್ತದೆ.
ಅದಕ್ಕೆ ಪ್ರತಿಕ್ರಿಯಿಸಿದ ವಿಮರ್ಶಕಿ, ಅವರು ಚಿಕ್ಕಂದಿನಿಂದಲೂ ಚಿತ್ರಗಳಲ್ಲಿ ನಟಿಸಿದ್ದಾರೆ. ಅಭಿಮಾನಿಗಳ ಜೊತೆಯೇ ಬೆಳೆದಿದ್ದಾರೆ. ಗಾಯಕರಾಗಿ ಗಮನ ಸೆಳೆದಿದ್ದಾರೆ. ಅವರ ತಂದೆ ಡಾ. ರಾಜ್‌ಕುಮಾರ್ ಎಲ್ಲರ ಪ್ರೀತಿಯ ನಟರಾಗಿದ್ದರು. ಅವರ ಜೊತೆಯೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೇವಲ ನಟರಾಗಿ ಅಲ್ಲ. ಸಮಾಜ ಸೇವೆಯಿಂದಲೂ ಜನರಿಗೆ ಹತ್ತಿರವಾಗಿದ್ದರು. ಅವರ ಸಾವಿನ ಸುದ್ದಿ ನನಗೆ ಈಗಲೂ ನಂಬಲಾಗುತ್ತಿಲ್ಲ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಿಗಾಗಿ ಇಂದಲ್ಲ, ಭಾನುವಾರ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ
ಇದೇ ಸುದ್ದಿಯನ್ನು ಬಿಬಿಸಿ ಟ್ವೀಟ್ ಕೂಡ ಮಾಡಿದ್ದು, ಸಾವಿರಾರು ಮಂದಿ ಲೈಕ್ ಮಾಡಿ, 361 ಮಂದಿ ರೀಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಪುನೀತ್ ರಾಜ್ ಕುಮಾರ್ ನಿಧನದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಅಲ್ಲದೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತನಾಮರು ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದ್ದಾರೆ.