ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದ್ದ 'ಪವರ್ ಸ್ಟಾರ್': ಕೆಎಂಎಫ್ ಜಾಹೀರಾತುಗಳಿಗೆ ಉಚಿತವಾಗಿ ಪ್ರಚಾರ ಮಾಡಿದ್ದ ಪುನೀತ್!
ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಕೇವಲ ಚಿತ್ರರಂಗದಲ್ಲಿ ಮಾತ್ರವಷ್ಟೇ ನಟನಾಗಿರಲಿಲ್ಲ. ರಾಯಭಾರಿಯಾಗಿಯೂ ಬಹು ಬೇಡಿಕೆ ಹೊಂದಿದ್ದರು. ಹಲವು ಇಲಾಖೆಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದರು.
Published: 30th October 2021 09:51 AM | Last Updated: 30th October 2021 01:57 PM | A+A A-

ಪುನೀತ್ ರಾಜ್‌ಕುಮಾರ್
ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಕೇವಲ ಚಿತ್ರರಂಗದಲ್ಲಿ ಮಾತ್ರವಷ್ಟೇ ನಟನಾಗಿರಲಿಲ್ಲ. ರಾಯಭಾರಿಯಾಗಿಯೂ ಬಹು ಬೇಡಿಕೆ ಹೊಂದಿದ್ದರು. ಹಲವು ಇಲಾಖೆಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದರು.
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅಪ್ಪು, ತಂದೆಯ ಹಾದಿಯಂತೆಯೇ ನಡೆದುಕೊಂಡು ಬರುತ್ತಿದ್ದರು. ಗೌರವಧನ ಪಡೆಯದೇ 10 ವರ್ಷ ಕೆಎಂಎಫ್‌ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದರು.
ಡಾ.ರಾಜ್ ಕುಮಾರ್ ಕೂಡ ಇದೇ ರೀತಿಯಲ್ಲಿ ರೈತರ ಮೇಲಿನ ಕಳಕಳಿಯಿಂದ ನಂದಿನಿ ಉತ್ಪನ್ನಗಳ ಪರವಾಗಿ ಉಚಿತವಾಗಿ ಪ್ರಚಾರ ನಡೆಸಿದ್ದರು. ಡಾ.ರಾಜ್ 1990ರಲ್ಲಿ ನಂದಿನಿ ಹಾಲಿನಲ್ಲಿ ಪ್ರಚಾರ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು. ಅದು ಟೀವಿ ಜಾಹೀರಾತೊಂದರಲ್ಲಿ ರಾಜ್ ಅವರ ಮೊದಲ ಮತ್ತು ಕಡೆಯ ನಟನೆಯಾಗಿತ್ತು.
ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿಯೇ ಪುನೀತ್ ರಾಜ್ ಕುಮಾರ್ ಕೂಡ ನಂದಿನಿ ಪರವಾಗಿ ಉಚಿತವಾಗಿ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ 2009ರಲ್ಲಿ ಅವರು ಕೆಎಂಎಫ್ ಜೊತೆ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದರು.
ಕೆಎಂಎಫ್ ಮಾಜಿ ಎಂಡಿ ಪ್ರೇಮನಾಥ್ ಅವರು ಈ ಬಗಗೆ ಮಾತನಾಡಿ, ಡಾ.ರಾಜ್ ಕುಮಾರ್ ಅವರು 1990ರಲ್ಲಿ ಕೆಎಂಎಫ್'ನ ನಂದಿನಿ ಉತ್ಪನ್ನಗಳಿಗೆ ಉಚಿತವಾಗಿ ಪ್ರಚಾರ ಕೆಲಸಗಳನ್ನು ಮಾಡಿದ್ದರು. ಇದು ಅವರ ಮೊದಲ ಹಾಗೂ ಕೊನೆಯ ಜಾಹೀರಾತು ಆಗಿತ್ತು. ಈ ಜಾಹೀರಾತುಗಳು ದಿನಪತ್ರಿಕೆ ಹಾಗೂ ದೂರದರ್ಶನದಲ್ಲಿ ಪ್ರಸಾರವಾಗಿತ್ತು. 2006ರಲ್ಲಿ ರಾಜ್ ಕುಮಾರ್ ನಿಧನ ಹೊಂದಿದ ಬಳಿಕ ಕೆಲ ವರ್ಷಗಳ ಕಾಲ ಕೆಎಂಎಫ್ ಯಾವುದೇ ರಾಯಭಾರಿಯನ್ನೂ ಹೊಂದಿರಲಿಲ್ಲ. 2011ರಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ, ರಾಯಭಾರಿಯಾಗುವಂತೆ ಮನವಿ ಸಲ್ಲಿಸಿದ್ದೆ. ಈ ವೇಳೆ ಅವರು ಒಪ್ಪಿಕೊಂಡಿದ್ದರು. ಇದರ ಐಡಿಯಾ ಅಂದಿನ ಕೆಎಂಎಫ್ ಮುಖ್ಯಸ್ಥರಾಗಿದ್ದ ಸೋಮಶೇಖರ್ ರೆಡ್ಡಿಯವರದ್ದಾಗಿತ್ತು ಎಂದು ಸ್ಮರಿಸಿದ್ದಾರೆ.
ಮಾತುಕತೆ ವೇಳೆ ಗೌರವಧನ ಕುರಿತು ಮಾತನಾಡಿದಾಗ, ನನ್ನ ತಂದೆ ಒಂದು ಪೈಸೆ ಹಣವನ್ನೂ ಪಡೆಯದೆಯೇ ನಿಮಗೆ ಪ್ರಚಾರ ನೀಡಿರುವಾಗ, ನಾನು ಹೇಗೆ ಹಣವನ್ನು ಕೇಳಲಿ ಎಂದು ಪ್ರಶ್ನಿಸಿದ್ದರು. ಮೊದಲ ವರ್ಷ ಪುನೀತ್ ಅವರು ನಂದಿನಿ ಗುಡ್ ಲೈಫ್ ಟೆಟ್ರಾ ಪ್ಯಾಕ್'ಗೆ ಜಾಹೀರಾತು ನೀಡಿದ್ದರು. ದೇವರಾಯನದುರ್ಗದ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದೆವು. ಅದಕ್ಕೆ ಅವರು ಒಪ್ಪಿದ್ದರು. ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರತೀನಿತ್ಯ ಬೆಳಿಗ್ಗೆ 8 ಗಂಟಗೆ ಚಿತ್ರೀಕರಣಕ್ಕೆ ಬಂದು ಸಂಜೆ 6 ಗಂಟೆಗೆ ಹೋಗುತ್ತಿದ್ದರು. ಬಹಳ ವಿನಮ್ರ ರೀತಿಯ ವ್ಯಕ್ತಿ ಅವರದ್ದಾಗಿದ್ದು. ಮಕ್ಕಳೊಂದಿಗೆ ಕುಳಿತು ಊಟ ಮಾಡುತ್ತಿದ್ದರು. ಅವರು ನೀಡುತ್ತಿದ್ದ ಜಾಹೀರಾತುಗಳಿಂದ ಕೆಎಂಎಫ್ ಉತ್ಪನ್ನಗಳು ಉತ್ತಮ ರೀತಿಯಲ್ಲಿ ಮಾರಾಟವಾಗುತ್ತಿದ್ದವು. ಅದು ಪುನೀತ್ ಅವರ ಪವರ್ ಆಗಿತ್ತು ಎಂದಿದ್ದಾರೆ.