ಶಿವಮೊಗ್ಗದಲ್ಲಿ ಮೂಕ ಪ್ರಾಣಿಗಳ ಮಾರಣಹೋಮ: 38-40ಕ್ಕೂ ಹೆಚ್ಚು ಬೀದಿ ನಾಯಿಗಳ ಜೀವಂತ ಸಮಾಧಿ, ಪ್ರಕರಣ ದಾಖಲು
ಸುಮಾರು 38-40ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಜೀವಂತವಾಗಿ ಹೂತಿರುವ ಅಮಾನವೀಯ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಳಕಿಗೆ ಬಂದಿದೆ.
Published: 11th September 2021 08:21 AM | Last Updated: 11th September 2021 01:56 PM | A+A A-

ಸಂಗ್ರಹ ಚಿತ್ರ
ಶಿವಮೊಗ್ಗ: ಸುಮಾರು 38-40ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಜೀವಂತವಾಗಿ ಹೂತಿರುವ ಅಮಾನವೀಯ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಳಕಿಗೆ ಬಂದಿದೆ.
ಕಂಬದಾಳು-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥಪುರದಲ್ಲಿ ಮೂಕ ಪ್ರಾಣಿಗಳ ಮಾರಣಹೋಮ ನಡೆದಿದೆ.
ಸೆಪ್ಟೆಂಬರ್ 4 ರಂದು ಘಟನೆ ನಡೆದಿದ್ದು, ಬುಧವಾರ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಎನಿಮಲ್ ರೇಸ್ಕೂ ಕ್ಲಬ್ (ಪ್ರಾಣಿ ದಯಾ ಸಂಘ) ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಧಾರವಾಡ: ಬೀದಿ ನಾಯಿಗಳ ದಾಳಿಗೆ 8 ವರ್ಷದ ಬಾಲಕ ಬಲಿ
ಘಟನೆ ಕುರಿತು ಮಾತನಾಡಿರುವ ಭದ್ರಾವತಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಅವರು, ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ. ಉನ್ನತಾಧಿಕಾರಿಗಳಿಗೆ ಈ ಕುರಿತು ವರದಿಯನ್ನೂ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, ಕೆಲ ಮೂಲಗಳ ಪ್ರಕಾರ ನಾಯಿಗಳನ್ನು ಸಮಾಧಿ ಮಾಡುವುದಕ್ಕೂ ಮುನ್ನ ಅವುಗಳಿಗೆ ವಿಷವುಣಿಸಲಾಗಿತ್ತು ಎಂದು ತಿಳಿಸಿವೆ. ಇನ್ನು ಕೆಲವರು ನಾಯಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿಯೂ ನಾಯಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ ಎಂದೇ ದಾಖಲಿಸಲಾಗಿದ್ದು, ಘಟನೆ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.