ಬೆಂಗಳೂರು: ಫುಟ್ಬಾಲ್ ಸ್ಟೇಡಿಯಂ ನಲ್ಲಿ ಹಾಡಹಗಲೇ ರೌಡಿ ಶೀಟರ್ ಬರ್ಬರ ಹತ್ಯೆ

ನಗರದ ಅಶೋಕನಗರದ ಫುಟ್ಬಾಲ್ ಸ್ಟೇಡಿಯಂ ಬಳಿ ರೌಡಿಶೀಟರ್ ನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ
ಕೊಲೆಯಾದ ಅರವಿಂದ್
ಕೊಲೆಯಾದ ಅರವಿಂದ್

ಬೆಂಗಳೂರು: ನಗರದ ಅಶೋಕನಗರದ ಫುಟ್ಬಾಲ್ ಸ್ಟೇಡಿಯಂ ಬಳಿ ರೌಡಿಶೀಟರ್ ನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಫುಟ್ಬಾಲ್ ಸ್ಟೇಡಿಯಂ  ಬಳಿ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ಎಂಬಾತನನ್ನು ದುಷ್ಕರ್ಮಿಗಳ ಗುಂಪು ಕೊಚ್ಚಿ ಕೊಲೆ ಮಾಡಿದೆ. ಪುಲಿಕೇಶಿ ನಗರದ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ನನ್ನು ಕೆಲವು ದಿನಗಳ ಹಿಂದೆ ಗೂಂಡಾ ಆಕ್ಟ್ ನಲ್ಲಿ ಭಾರತೀನಗರ ಪೊಲೀಸರು ಜೈಲಿಗೆ ಕಳುಹಿಸಿದ್ದರು.

ಜಾಮೀನಿನ ಮೇಲೆ ಇತ್ತೀಚೆಗೆ ಹೊರಬಂದಿದ್ದ ಈತನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಉಪ ಪೊಲೀಸ್ ಆಯುಕ್ತ (ಕೇಂದ್ರ) ಅನುಚೇತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಫುಟ್ಬಾಲ್ ತಂಡವನ್ನು ನಿರ್ವಹಿಸುತ್ತಿದ್ದ ರೌಡಿ ಶೀಟರ್ ಅರವಿಂದ್ ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣದ ಎದುರಿನ ಬಿಬಿಎಂಪಿ ಮೈದಾನದಲ್ಲಿ ಪಂದ್ಯಾವಳಿಯಲ್ಲಿ ಆಡಲು ಬಂದಿದ್ದರು. ಸಂಜೆ ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರಗಳನ್ನು ಹಿಡಿದು ಅರವಿಂದ್​​ನನ್ನು   ಸುತ್ತು ವರೆದಿದ್ದಾರೆ. 

ನಂತರ ಆತ ಸ್ಥಳದಿಂದ ಪರಾರಿಯಾಗಿ ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣವನ್ನು ಪ್ರವೇಶಿಸಿ ರೆಫರಿಯ ಕೊಠಡಿಯೊಳಗೆ ಹೋಗಿ ಬೀಗ ಹಾಕಿಕೊಂಡಿದ್ದಾನೆ. ಆದರೂ ಬಿಡದ ಆರೋಪಿಗಳು, ಬಾಗಿಲು ಮುರಿದು ಮಾರಕ ಆಯುಧಗಳನ್ನು ಬಳಸಿ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಗುರುತಿಸಿ ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ.

ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಅರವಿಂದ್ ರೌಡಿ ಶೀಟರ್ ಆಗಿದ್ದಾನೆ ಹಾಗೂ ಕೆಲ ದಿನಗಳ ಹಿಂದೆಯಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಮಾಹಿತಿ ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com