ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ: 3 ಆರೋಪಿಗಳ ಬಂಧನ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಂದರ ಯುವತಿಯರ ಸೋಗಿನಲ್ಲಿ ಜನರನ್ನು ಸ್ನೇಹದ ಬಲೆಗೆ ಬೀಳಿಸಿಕೊಂಡು ಬಳಿಕ ಅವರನ್ನು ವಿವಸ್ತ್ರಗೊಳಿಸಿದ ವಿಡಿಯೋ ಮಾಡಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ವೊಂದರ ಮೂಲ ಪತ್ತೆ ಹೆಚ್ಚುವಲ್ಲಿ ಸಿಐಡಿ ಪೊಲೀಸರು ಯಶಸ್ಸು ಕಂಡಿದ್ದು, ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್'ಗೆ ಸಾವಿರಾರು ಸಿಮ್ ಕಾರ್ಡ್ ಗಳನ್ನು ಪೂರೈಸಿದ್ದ ಹರಿಯಾಣ ಮೂಲಕ ಮೊಹಮ್ಮದ್ ಮುಜಾಹಿದ್, ಮೊಹಮ್ಮದ್ ಇಕ್ಬಾಲ್ ಹಾಗೂ ಆಸಿಫ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಗಳಿಂದ ಐದಾರು ಮೊಬೈಲ್‌ಗಳು, ಸಾವಿರಾರು ನಕಲಿ ಸಿಮ್ ಕಾರ್ಡ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಬಂಧನಕ್ಕೆ ತೆರಳಿದಾಗ ಸಿಐಡಿ ಅಧಿಕಾರಿಗಳ ಮೇಲೆ ಪುಲ್ವಾಲ ಗ್ರಾಮದ ಸ್ಥಳೀಯರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸದಂತೆ ತಡೆಯೊಡ್ಡಿದ್ದಲ್ಲದೆ, ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ದೊಣ್ಣೆಯಿಂದ ಗಾಜುಗಳನ್ನು ಧ್ವಂಸಗೊಳಿಸಿದ್ದರು.
ಅನಂತರ ಸ್ಥಳೀಯ ಪೊಲೀಸರ ನೆರವು ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಈ ವೇಳೆ ಪುಲ್ವಾಲ, ನೂಹ್ ಮತ್ತು ಪುನ್ಹಾನ ಗ್ರಾಮದ ಬಹಳಷ್ಟು ಮಂದಿ ಇದೇ ದಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಘಟನೆ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಮೂಲಕ ದೇಶದ ವಿವಿಧೆಡೆ ದಾಖಲಾಗಿದ್ದ 3900 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, ದೇಶದಲ್ಲಿ ನಡೆಯುತ್ತಿರುವ ಈ ರೀತಿಯ ದಂಧೆಕೋರರಿಗೆ ಆರೋಪಿಗಳೇ ಸಿಮ್ ಕಾರ್ಡ್‌ಗಳನ್ನು ಪೂರೈಕೆ ಮಾಡುತ್ತಿದ್ದರು ಎಂಬುದು ಸಿಐಡಿ ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ಮುಜಾಹಿದ್ ನಕಲಿ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳ ಏಜೆನ್ಸಿ ಪಡೆದುಕೊಂಡಿದ್ದ. ವಿತರಕರಿಂದ ಸಿಮ್ ಕಾರ್ಡ್‌ಗಳ್ನು ಆಕ್ಟಿವ್ ಮಾಡುವ ಸಲುವಾಗಿ ಡೆಮೋ ಸಿಮ್‌ಗಳು ಮತ್ತು ಒಟಿಪಿಗಳನ್ನು ಪಡೆದುಕೊಳ್ಳುತ್ತಿದ್ದರು. ಬಳಿಕ ಈ ಮೊದಲು ಡಿಜಿಟಲ್ ವ್ಯಾಲೆಟ್‌ನೊಂದಿಗೆ ಸಂಪರ್ಕದಲ್ಲಿದ್ದ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಮಾಡಿ ನಕಲಿ ದಾಖಲಾತಿಗಳ ಮೂಲಕ ಇತರೆ ಇಬ್ಬರು ಆರೋಪಿಗಳ ಜತೆ ಸೇರಿಕೊಂಡು ಕಳೆದ 10 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಸಕ್ರಿಯಗೊಳಿಸಿ, ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದಾನೆ.
ಆಸಿಫ್ ಸಿಮ್ ಕಾರ್ಡ್‌ಗಳನ್ನು ಆ್ಯಕ್ಟಿವ್ ಮಾಡುವಲ್ಲಿ ಮುಜಾಹಿದ್‌ನ ಸಬ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಹಾಗೆಯೇ ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಫೋಟೋಗಳನ್ನು ಮುಜಾಹಿದ್‌ಗೆ ನೀಡುತ್ತಿದ್ದ.
ಮತ್ತೊಬ್ಬ ಆರೋಪಿ ಇಕ್ಬಾಲ್ ನಕಲಿ ಆಧಾರ್ ಕಾರ್ಡ್ ಸೃಷ್ಟಿಸುವುದನ್ನು ಕರಗತ ಮಾಡಿಕೊಂಡಿದ್ದಾನೆ. ಕಂಪ್ಯೂಟರ್ ಪ್ರಿಂಟಿಂಗ್ ಮತ್ತು ಜೆರಾಕ್ಸ್ ಅಂಗಡಿ ಹೊಂದಿದ್ದು, ಮುಜಾಹಿದ್ ಮತ್ತು ಆಸಿಫ್ ನೀಡುತ್ತಿದ್ದ ಪೋಟೋಗಳನ್ನು ಬಳಸಿ, ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುತ್ತಿದ್ದ ಎಂಬುದು ಪತ್ತೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ