ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಜಾರಿ, ಕೃಷಿ ಪಂಪ್ ಸೆಟ್ ಗೆ ವಿನಾಯಿತಿ

ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ...
ಸುನೀಲ್ ಕುಮಾರ್
ಸುನೀಲ್ ಕುಮಾರ್

ಬೆಂಗಳೂರು: ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ ಅಳವಡಿಕೆ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ಇಂದು ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂರು ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ, ಮೊದಲು ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಮಾಡುತ್ತೇವೆ. ಈಗಾಗಲೇ 5792 ಕೋಟಿ ವಿದ್ಯುತ್ ಬಿಲ್ ಸರ್ಕಾರಿ ಕಚೇರಿಗಳಿಂದ ಬಾಕಿ ಬರಬೇಕಿದೆ. ಹಾಗಾಗಿ ಅಲ್ಲಿ ಮೊದಲು ಅಳವಡಿಕೆ ಮಾಡಲಾಗುತ್ತದೆ ಎಂದರು.

ಎರಡನೇ ಹಂತದಲ್ಲಿ ಹೊಸ ಕಟ್ಟಡ ನಿರ್ಮಾಣ ವೇಳೆ ಪಡೆಯುವ ತಾತ್ಕಾಲಿಕ ಸಂರ್ಪಕಕ್ಕೆ ಸ್ಮಾರ್ಟ್ ಮೀಟರ್(ಪ್ರೀಪೇಡ್) ಅಳವಡಿಸಲಾಗುತ್ತದೆ. ಮೂರನೆಯದಾಗಿ 27 ಅಮೃತ ಸಿಟುಗಳಿಗೆ ಅಳವಡಿಸಲಾಗುತ್ತದೆ ಎಂದರು.

ಶೇ. 15 ಕ್ಕೂ ಹೆಚ್ಚು ವಿದ್ಯುತ್ ಬಿಲ್ ನಷ್ಟವಾಗುತ್ತಿರುವ ಕಡೆ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರ ಸರ್ಕಾರ ಹೇಳಿದೆ. ಅದರಂತೆ ಅಳವಡಿಕೆ ಮಾಡಲಾಗುತ್ತದೆ. ಮೀಟರ್ ಅಳವಡಿಕೆಗೆ ಗ್ರಾಹಕರ ಮೇಲೆ ಹೊರಹಾಕಲ್ಲ, ಅದನ್ನು ‌ಎಸ್ಕಾಂ ಗಳೇ ಭರಿಸಲಿವೆ. ಆದರೆ ಯಾವುದೇ ಕಾರಣಕ್ಕೂ ಸ್ಮಾರ್ಟ್ ಮೀಟರ್, ಪ್ರೀಪೇಡ್ ಮೀಟರ್ ಗಳನ್ನು ಕೃಷಿ ಪಂಪ್ ಸೆಂಟ್ ಗಳಿಗೆ ಹಾಕಲ್ಲ. ಅಂತಹ ಪ್ರಯೋಗವನ್ನೂ ಮಾಡುವುದಿಲ್ಲ ಎಂದು ಇಂಧನ ಸಚಿವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ‌ ಈಗಾಗಲೇ ಒಂದು ಲಕ್ಷ ಮೀಟರ್ ಅಳವಡಿಸಿದ್ದೇವೆ. ಇದರ ಸಾಧಕ ಬಾಧಕ ನೋಡಿ ಇತರ ಕಡೆ ವಿಸ್ತರಣೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ರೈತರ ಕೃಷಿ ಪಂಪ್‌ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ ಫಾರ್ಮರ್ ಸುಟ್ಟು ಹೋದ ಪಕ್ಷದಲ್ಲಿ 24 ಗಂಟೆಯಲ್ಲಿ ಬದಲಾಯಿಸಿಕೊಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಾನೆ ಶ್ರೀನಿವಾಸ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟ್ರಾನ್ಸ್ ಫಾರ್ಮರ್ ಸುಟ್ಟರೆ ಅವುಗಳನ್ನು ಬದಲಾಯಿಸಲು ರೈತರ ವಾಹನ ಬಳಸಬೇಡಿ, ನಿಮ್ಮ ವಾಹನ ಬಳಸಿ ಎಂದು ಎಸ್ಕಾಂಗಳಿಗೆ ತಿಳಿಸಲಾಗಿದೆ,ಜೊತೆಗೆ ಟ್ರಾನ್ಸ್ ಫಾರ್ಮರ್ ಸುಟ್ಟರೆ 24 ಗಂಟೆಯಲ್ಲಿ ಬದಲಾವಣೆ ಮಾಡಬೇಕು, ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ, ಆದಷ್ಟು ಬೇಗ ಇದನ್ನು ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಟ್ರಾನ್ಸ್ ಫಾರ್ಮರ್ ಬದಲಾಯಿಸಲು ರೈತರಿಂದ ಹಣ ಪಡೆಯುವಂತಿಲ್ಲ ಯಾರಾದರೂ ಹಣ ಪಡೆದಿದ್ದರೆ ಆ ಬಗ್ಗೆ ಮಾಹಿತಿ ತಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com