ಕೆಟ್ಟ ರಸ್ತೆಗಳಿಗೆ ಯಾರು ಹೊಣೆ? ರಸ್ತೆ ನಿರ್ವಹಣೆ ಮಾಡಲು ಎಷ್ಟು ಸಮಯ ಬೇಕು? ಸದನದಲ್ಲಿ ಸಿಎಂಗೆ ಪ್ರತಿಪಕ್ಷಗಳ ತರಾಟೆ!

ರಸ್ತೆಗಳ ವಿಚಾರದಲ್ಲಿ ಜನರಿಂದ ನಾವು ಸಾಕಷ್ಟು ಟೀಕೆ ಎದುರಿಸುತ್ತಿದ್ದು, ಬೆಂಗಳೂರಿನ ಪ್ರತಿ ವಾರ್ಡಿನ ಮುಖ್ಯ ರಸ್ತೆಗಳ ಕುರಿತು ರೋಡ್ ಆಡಿಟ್ ಮಾಡಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಸ್ತೆಗಳ ವಿಚಾರದಲ್ಲಿ ಜನರಿಂದ ನಾವು ಸಾಕಷ್ಟು ಟೀಕೆ ಎದುರಿಸುತ್ತಿದ್ದು, ಬೆಂಗಳೂರಿನ ಪ್ರತಿ ವಾರ್ಡಿನ ಮುಖ್ಯ ರಸ್ತೆಗಳ ಕುರಿತು ರೋಡ್ ಆಡಿಟ್ ಮಾಡಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪರಿಷತ್‌ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪಿಆರ್ ರಮೇಶ್ ಬೆಂಗಳೂರು ನಗರದ ರಸ್ತೆಗಳ ಗುಂಡಿ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಕಾಲಕಾಲಕ್ಕೆ ಮಾರ್ಪಾಡು ಮಾಡುವ ಕಾರಣದಿಂದ ರಸ್ತೆ ನಿರ್ಮಾಣ ವಿಳಂಬವಾಗಲಿದೆ, ಎಲ್ಲ ಸ್ಮಾರ್ಟ್ ಸಿಟಿಯಲ್ಲಿಯೂ ತಜ್ಞರ ಅಭಿಪ್ರಾಯ ಪಡೆದು ಕಾಮಗಾರಿ ಮಾಡಬೇಕಾಗಿದೆ. ಒಬ್ಬೊಬ್ಬ ತಜ್ಞ ಬಂದು ಒಂದೊಂದು ಸಲಹೆ ನೀಡುತ್ತಾರೆ. ಅದೆಲ್ಲಾ ಪರಿಗಣಿಸಿ ಮಾಡಬೇಕಿದೆ. ಬೆಂಗಳೂರು ರಸ್ತೆಗಳ ಬಗ್ಗೆ ಸಮಿತಿ ರಚಿಸಿದ್ದೇವೆ. ಇಂಡಿಯನ್ ರೋಡ್ ಕಾಂಗ್ರೆಸ್ ಅನ್ವಯ ರಸ್ತೆಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಸಚಿವರ ಉತ್ತರಕ್ಕೆ ಸದಸ್ಯರು ತೃಪ್ತರಾಗದೇ ಇದ್ದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರ್ವಜನಿಕರ ಮನಸ್ಸಿನಲ್ಲಿ ಕಾಡುತ್ತಿರುವ ಪ್ರಶ್ನೆಯೂ ರಸ್ತೆ ಗುಂಡಿಯದ್ದಾಗಿದೆ. ವಿಳಂಬ ಮತ್ತು ಗುಣಮಟ್ಟದ ಬಗ್ಗೆ ಸದಸ್ಯರು ಪ್ರಶ್ನಿಸಿದ್ದಾರೆ. ಪಾಟ್ ಹೋಲ್, ಥರ್ಮಲ್ ಕ್ರ್ಯಾಕಿಂಗ್, ಸ್ಟ್ರಿಪ್ಪಿಂಗ್ ಇಲ್ಲದ ರಸ್ತೆ ದೇಶದಲ್ಲೇ ಎಲ್ಲೂ ಸಿಗಲ್ಲ, ಒಂದಲ್ಲಾ ಒಂದು ಸಮಸ್ಯೆ ಇರಲಿದೆ, ಬೆಂಗಳೂರಿನ ರಸ್ತೆಗೆ ಸಾಕಷ್ಟು ಟೀಕೆ ಎದುರಿಸುತ್ತಿದ್ದೇವೆ ಎಂದರು.

ಇನ್ನು, ಮುಖ್ಯ ರಸ್ತೆಗಳ ಬಗ್ಗೆ ರೋಡ್ ಮೆಂಟೆನೆನ್ಸ್ ರೋಡ್ ಆಡಿಟ್ ಮಾಡಲು ನಿರ್ಧರಿಸಿದ್ದು, ರಸ್ತೆ ನಿರ್ಮಾಣ, ರಸ್ತೆ ನಿರ್ಮಿಸಿ ಎಷ್ಟು ವರ್ಷ ಆಗಿದೆ. ನಿರ್ವಹಣೆ ಆಗಿದೆಯಾ? ದುರಸ್ತಿ, ಪಾಟ್ ಹೋಲ್, ಯಾವ ಏಜೆನ್ಸಿ ರಸ್ತೆ ಕೆಲಸ ಮಾಡಿದೆ? ಲೋಪವಾಗಿದ್ದರೆ ಯಾರು ಹೊಣೆ ಎನ್ನುವ ಕುರಿತು ಆಡಿಟ್ ಮಾಡಲಾಗುತ್ತದೆ. ಮಾಗಡಿ ರಸ್ತೆ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಂಗಳು ಭರವಸೆ ನೀಡಿದರು.

2015-16 ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಬಿಬಿಎಂಪಿ 198 ವಾರ್ಡ್‌ಗಳಲ್ಲಿ ರಸ್ತೆ ಮತ್ತು ನಿರ್ವಹಣಾ ಕಾರ್ಯಗಳಿಗಾಗಿ 20060.02 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಸಿಎಂ ತಿಳಿಸಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ಟೆಂಡರ್‌ಶೂರ್ ಯೋಜನೆಗಳ ಅಡಿಯಲ್ಲಿ 46 ರಸ್ತೆಗಳನ್ನು 436.60 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com