ಬೆಂಗಳೂರಿನ ಶ್ರೀ ಚೈತನ್ಯ ಪಿಯು ಕಾಲೇಜಿನ 60 ವಿದ್ಯಾರ್ಥಿಗಳಲ್ಲಿ ಕೊರೋನಾ: ಜಿಲ್ಲಾಧಿಕಾರಿ ಹೇಳಿದ್ದೇನು?

ನಗರದ ಖಾಸಗಿ ಶಾಲೆಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಬಗ್ಗೆ ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್

ಬೆಂಗಳೂರು; ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೋವಿಡ್-19 ಸೋಂಕು ಹೆಚ್ಚು ಮಂದಿ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡ ಬಗ್ಗೆ ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹಸ್ಕರ್ ನಲ್ಲಿರುವ ಶ್ರೀ ಚೈತನ್ಯ ಪಿಯು ಕಾಲೇಜಿನ ಓರ್ವ ವಿದ್ಯಾರ್ಥಿನಿಗೆ ಕಳೆದ ಭಾನುವಾರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿತು. ಸುದ್ದಿ ತಿಳಿದ ಕೂಡಲೇ ನಾವು ಕಾರ್ಯಪ್ರವೃತ್ತರಾದೆವು. ಶಾಲೆಯಲ್ಲಿ 480 ವಿದ್ಯಾರ್ಥಿಗಳಿದ್ದಾರೆ. ಎಲ್ಲರನ್ನೂ ಕೊರೋನಾ ಪರೀಕ್ಷೆಗೊಡ್ಡಲಾಯಿತು. ಅವರಲ್ಲಿ 60 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ. ಕಾಲೇಜಿನ 17 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಮೊದಲು ಸೋಂಕು ಕಾಣಿಸಿಕೊಂಡಿತು. 

ಇದು ವಸತಿ ಶಾಲೆಯಾಗಿದ್ದು ಇಲ್ಲಿಗೆ ಕಳೆದು ತಿಂಗಳು ವಿದ್ಯಾರ್ಥಿಗಳು ಬಂದಿದ್ದರು. ಶಾಲೆಗೆ ಬರುವಾಗ ಯಾವುದೇ ರೋಗಲಕ್ಷಣವಿರಲಿಲ್ಲ. ಪಾಸಿಟಿವ್ ಬಂದ 60 ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ ಮಾತ್ರ ಸೋಂಕಿನ ಲಕ್ಷಣ ಕಂಡುಬರುತ್ತಿದೆ. ನಮ್ಮ ಆರೋಗ್ಯ ತಂಡ ಶಾಲೆಯ ಬಳಿ ಇದ್ದು ಎಲ್ಲರನ್ನೂ ಪರೀಕ್ಷೆಗೊಳಪಡಿಸಿ ಉಸ್ತುವಾರಿ ನೋಡಿಕೊಳ್ಳುತ್ತಿದೆ ಎಂದು ಸುದ್ದಿಸಂಸ್ಥೆಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇನ್ನು 7 ದಿನ ಕಳೆದ ನಂತರ ಮತ್ತೊಮ್ಮೆ ಮರುಪರೀಕ್ಷೆ ಮಾಡುತ್ತೇವೆ. ಅಕ್ಟೋಬರ್ 20ರವರೆಗೆ ಶಾಲೆ ಮುಚ್ಚಲಾಗುತ್ತಿದ್ದು, ಪೋಷಕರು ಆತಂಕಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಪಾಸಿಟಿವ್ ಕಂಡುಬಂದ 60 ವಿದ್ಯಾರ್ಥಿಗಳಲ್ಲಿ 14 ಮಂದಿ ತಮಿಳು ನಾಡು ಹಾಗೂ ಉಳಿದವರು ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದವರು ಎಂದು ಜಿಲ್ಲಾಧಿಕಾರಿ ಜೆ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಆನೇಕಲ್ ತಾಲ್ಲೂಕು ಅಧಿಕಾರಿಗಳು, ಸೆಪ್ಟೆಂಬರ್ 6ಕ್ಕೆ ಕಾಲೇಜು ಆರಂಭಗೊಂಡಿತು. ಪಿಯುಸಿ ವಿದ್ಯಾರ್ಥಿನಿಯಲ್ಲಿ ಕಫ, ಶೀತ ಮತ್ತು ಸ್ವಲ್ಪ ಜ್ವರ ಕಾಣಿಸಿಕೊಂಡು ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಬಂತು. ಆಕೆಯ ಆರ್ ಟಿ-ಪಿಸಿಆರ್ ವರದಿಯಲ್ಲಿ ಕೂಡ ಪಾಸಿಟಿವ್ ಬಂದಿತ್ತು. ನಂತರ ಹಾಸ್ಟೆಲ್ ನಲ್ಲಿದ್ದ ಹಲವು ವಿದ್ಯಾರ್ಥಿಗಳಲ್ಲಿ ಸಹ ಸೋಂಕಿನ ಲಕ್ಷಣ ಕಂಡುಬಂದು ನಂತರ ಎಲ್ಲರಿಗೂ ಆರ್ ಎಟಿ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂತು, ಉಳಿದವರು ಆರ್ ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಂಡರು ಎಂದಿದ್ದಾರೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ ವಿನಯ್ ಕುಮಾರ್, ಕಾಲೇಜಿನಲ್ಲಿ 550 ವಿದ್ಯಾರ್ಥಿಗಳಿದ್ದು 300 ವಿದ್ಯಾರ್ಥಿಗಳನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು 60 ಮಂದಿಯಲ್ಲಿ ಪಾಸಿಟಿವ್ ಬಂದಿದೆ. ಉಳಿದ ಬ್ಲಾಕ್ ಗಳಲ್ಲಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಮಾಡಲಾಗಿದ್ದು ಕಾಲೇಜು ಕ್ಯಾಂಪಸ್ ನ್ನು ಕಂಟೈನ್ ಮೆಂಟ್ ವಲಯ ಎಂದು ಘೋಷಿಸಲಾಗಿದೆ. 14 ದಿನ ಕಾಲೇಜನ್ನು ಮುಚ್ಚಿದ್ದೇವೆ ಎಂದರು.

ಹಾಸ್ಟೆಲ್ ನಲ್ಲಿ ಹಲವು ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿರುವುದು ವಿದ್ಯಾರ್ಥಿಗಳ ಪೋಷಕರನ್ನು ಆತಂಕಕ್ಕೀಡುಮಾಡಿದೆ. ತಮ್ಮ ಮಕ್ಕಳನ್ನು ವಾಪಸ್ ಕಳುಹಿಸಿಕೊಡುವಂತೆ ಕೇಳಿದ್ದಾರೆ. ಜಿಲ್ಲಾ ವಿಚಕ್ಷಣಾ ಅಧಿಕಾರಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಸೆಪ್ಟೆಂಬರ್ ಆರಂಭದಲ್ಲಿ ಬಿಬಿಎಂಪಿ ನಗರ ವಲಯದಲ್ಲಿ ಹೊರಮಾವು ನರ್ಸಿಂಗ್ ಕಾಲೇಜಿನ 34 ವಿದ್ಯಾರ್ಥಿಗಳಲ್ಲಿ ಮತ್ತು ಧನವಂತ್ರಿ ನರ್ಸಿಂಗ್ ಕಾಲೇಜಿನ 24 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ಜಿಲ್ಲಾ ಆರೋಗ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಸೋಂಕು ಬೇರೆ ಕಡೆ ಹರಡದಂತೆ ಕ್ರಮ ವಹಿಸಬೇಕು. ದಕ್ಷ ನಿರ್ವಹಣೆ ಮುಖ್ಯವಾಗುತ್ತದೆ ಎಂದು ಕೋವಿಡ್ ಕಾರ್ಯಪಡೆಯ ಸದಸ್ಯರೊಬ್ಬರು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com