ನಗ್ನ ವಿಡಿಯೋ ಸೆರೆ ಹಿಡಿದು, ವಿಧವೆಯರು, ವಿಚ್ಛೇದಿತ ಮಹಿಳೆಯರ ಸುಲಿಗೆ ಮಾಡುತ್ತಿದ್ದ ನಾಲ್ವರ ಬಂಧನ
ಬೆಂಗಳೂರು: ವಿಧವೆಯರು, ವಿಚ್ಛೇದಿತ ಮಹಿಳೆಯರನ್ನು ನೌಕರಿ ಕೊಡಿಸುವುದಾಗಿ, ಆರ್ಥಿಕ ಸಹಾಯ ಮಾಡುವುದಾಗಿ ನಂಬಿಸಿ ಕರೆದೊಯ್ದು ನಗ್ನ ವೀಡಿಯೋ ಸೆರೆ ಹಿಡಿದು ಬೆದರಿಕೆ ಹಾಕಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ಜಾಲವೊಂದು ಬೆಳಕಿಗೆ ಬಂದಿದೆ.
ಈ ಗ್ಯಾಂಗ್ ನ ನಾಲ್ವರು ವ್ಯಕ್ತಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ, ಈ ಜಾಲದಲ್ಲಿ ಮಹಿಳೆಯೂ ಶಾಮೀಲಾಗಿದ್ದು, ಚಿಕ್ಕಗೊಲ್ಲರಹಟ್ಟಿಯ ಶ್ರೀನಿವಾಸ್ ಹಾಗೂ ಆತನ ಪತ್ನಿ ಮಂಗಳ ಹಾಗೂ ತುಮಕೂರಿನ ಕುಣಿಗಲ್ ನ ಶಿವಕುಮಾರ್ ಬಂಧನಕ್ಕೊಳಗಾಗಿರುವ ವ್ಯಕ್ತಿಗಳಾಗಿದ್ದಾರೆ.
ಶ್ರೀನಿವಾಸ್ ಹಾಗೂ ಶಿವಕುಮಾರ್ ಇಬ್ಬರೂ ಸಹೋದರರಾಗಿದ್ದು, ಗ್ಯಾಸ್ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆರೋಪಿಗಳು ವಿಚ್ಛೇದಿತ ಮಹಿಳೆಯರು, ವಿಧವೆಯರು ಹಾಗೂ ಪೋಷಕರಿಂದ ದೂರ ಆಗಿರುವ ಮಹಿಳೆಯರನ್ನು ಗುರುತಿಸುತ್ತಿದ್ದರು.
ಆರೋಪಿ ಮಂಗಳ, ಮಹಿಳೆಯರ ವಿವರಗಳನ್ನು ಪಡೆದು, ಅವರೊಂದಿಗೆ ಮಾತನಾಡಿ, ವಿಶ್ವಾಸ ಗಳಿಸುತ್ತಿದ್ದರು. ಬಳಿಕ ನೌಕರಿ ಕೊಡಿಸುವ ನೆಪದಲ್ಲಿ ತಮ್ಮೊಂದಿಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮಾರಕಾಸ್ತ್ರಗಳನ್ನು ತೋರಿಸಿ ನಗ್ನಗೊಳಿಸುತ್ತಿದ್ದರು, ಪ್ರತಿಭಟಿಸಿದವರ ಮೇಲೆ ಹಲ್ಲೆ ಮಾಡಿ ಅವರ ನಗ್ನ ವಿಡಿಯೋ ಸೆರೆ ಹಿಡಿಯುತ್ತಿದ್ದ ಆರೋಪಿಗಳು ಆ ಮಹಿಳೆಯರಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಒಂದು ವೇಳೆ ಬೇಡಿಕೆ ಇಟ್ಟ ಮೊತ್ತದ ಹಣವನ್ನು ನೀಡದೇ ಇದ್ದಲ್ಲಿ ತಮ್ಮ ಬಳಿ ಇರುವ ವೀಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು.
ಭಯದಿಂದ ಈ ವರೆಗೂ ಯಾವುದೇ ಸಂತ್ರಸ್ತ ಮಹಿಳೆಯರೂ ದೂರು ನೀಡಿರಲಿಲ್ಲ. ಆದರೆ ಇತ್ತೀಚೆಗೆ ಇದೇ ಪರಿಸ್ಥಿತಿ ಎದುರಿಸಿದ್ದ ಓರ್ವ ಮಹಿಳೆ ಧೈರ್ಯದಿಂದ ದೂರು ನೀಡಿದಾಗ ಈ ವಂಚಕ, ಸುಲಿಗೆಕೋರರ ಜಾಲ ಬಯಲಾಗಿದೆ.
ಪೊಲೀಸರು ಬಂಧಿತರಿಂದ 1.20 ಲಕ್ಷ ಮೌಲ್ಯದ ಚಿನ್ನಾಭರಣ, 70,000 ರೂಪಾಯಿ ನಗದು ಹಾಗೂ ಕಾರು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ