ಕಾಲು ಬಾಯಿ ರೋಗ ನಿಯಂತ್ರಣಕ್ಕೆ ಒಂದು ಕೋಟಿ ವ್ಯಾಕ್ಸಿನ್: ಪ್ರಭು ಬಿ.ಚವ್ಹಾಣ್
ಬೆಂಗಳೂರು: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಕಾಲುಬಾಯಿ ರೋಗ ನಿಯಂತ್ರಿಸಲು ಶೀಘ್ರದಲ್ಲೇ ಒಂದು ಕೋಟಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಪಶು ಸಂಗೋಪನೆ ಸಚಿವ ಪುರುಷೋತ್ತ ರೂಪಾಲ್ ಅವರನ್ನು ಭೇಟಿ ಮಾಡಿ, ಜಾನುವಾರುಗಳ ಆರೋಗ್ಯ ಮತ್ತು ರೋಗ ನಿಯಂತ್ರಣಕ್ಕೆ ಅನುದಾನ ಹಾಗೂ ಅಗತ್ಯ ಲಸಿಕೆಯನ್ನು ತುರ್ತಾಗಿ ನೀಡುವಂತೆ ಮನವಿ ಮಾಡಿರುವುದಾಗಿ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
2022-23ನೇ ಸಾಲಿನ ರಾಷ್ಟ್ರೀಯ ಜಾನುವಾರು ಯೋಜನೆಯಡಿ ಜಾನುವಾರುಗಳಿಗೆ ಮೇವು ಉತ್ಪಾದನೆಗಾಗಿ 51 ಕೋಟಿ ರೂ. ಅನುದಾನ ಮತ್ತು ಜಾನುವಾರುಗಳಿಗೆ ಮೂರನೇ ಸುತ್ತು ಎಫ್.ಎಂ. ಡಿ ಲಸಿಕೆಯನ್ನು ನೀಡಬೇಕಾಗಿರುವುದರಿಂದ ಒಂದು ಕೋಟಿ ಲಸಿಕೆಯನ್ನು ತುರ್ತಾಗಿ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಜಾನುವಾರುಗಳಲ್ಲಿ ಕಂಡುಬರುವ ರೋಗ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿರುವ ಪುರುಷೋತ್ತಮ್ ರೂಪಾಲ ಅವರು, ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ಧ ವರ್ಷಕ್ಕೆ 2 ಬಾರಿ ಲಸಿಕೆಯನ್ನು ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕಾಲುಬಾಯಿ ರೋಗ ನಿಯಂತ್ರಣದಲ್ಲಿ ಪಶು ಸಂಗೋಪನಾ ಇಲಾಖೆ ತೊಡಗಿದೆ. ಕೇಂದ್ರದಿಂದ ರಾಜ್ಯಕ್ಕೆ ಒಂದು ಕೋಟಿ ಲಸಿಕೆ ದೊರೆತಿದ್ದು, ರಾಜ್ಯದಲ್ಲಿ ಕಾಲುಬಾಯಿ ರೋಗ ಕಂಡುಬಂದ ಪ್ರದೇಶದಲ್ಲಿ ಆದ್ಯತೆ ಮೇರೆಗೆ ತುರ್ತಾಗಿ ಲಸಿಕೆ ವಿತರಣೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಂಡುಬಂದಾಗ ಹಾಗೂ ತುರ್ತು ಆರೋಗ್ಯ ಸೇವೆ ಸಂದರ್ಭಗಳಲ್ಲಿ ರೈತರು, ಪಶುಪಾಲಕರು ಆತಂಕಕ್ಕೊಳಗಾಗದೇ ಸಹಾಯವಾಣಿ ದೂರವಾಣಿ ಸಂಖ್ಯೆ 1962 ಹಾಗೂ ಇಲಾಖಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಗಾಗಿ 82777100200 ಕರೆ ಮಾಡಬಹುದು, ಕಾಲುಬಾಯಿ ರೋಗ ನಿಯಂತ್ರಣಕ್ಕೆ ರೈತರು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಸಚಿವರು ಕರೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ