ಬೆಂಗಳೂರು: ಸೋಶಿಯಲ್ ಮೀಡಿಯಾ ಆ್ಯಪ್ ಕ್ಲಬ್ ಹೌಸ್ ನ ಚರ್ಚೆಯೊಂದರಲ್ಲಿ ಕೆಲ ಯುವಕರು ಪಾಕಿಸ್ತಾನ ಪರ ಘೋಷಣೆ ಕೂಗಿದ ನಂತರ ಬೆಂಗಳೂರು ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 14 ರಂದು ರಾತ್ರಿ ಈ ಘಟನೆ ನಡೆದಿದೆ. ಕೆಲವರು ಕ್ಲಬ್ ಹೌಸ್ ಡಿಪಿಗೆ ಪಾಕಿಸ್ತಾನದ ರಾಷ್ಟ್ರ ಧ್ವಜ ಹಾಕಿ, ಪಾಕಿಸ್ತಾನ ಪರ ಘೋಷಣೆ ಕೂಗಿರುವ ಸ್ಕ್ರೀನ್ ಶಾಟ್ ನ್ನು ಚರ್ಚೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೋರ್ವ ತೆಗೆದುಕೊಂಡಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಚರ್ಚೆಯ ನಂತರ ಕೆಲವರು ಸಂಬಂಧಿಸಿದ ಆಡಳಿತ ತಮ್ಮ ಮೇಲೆ ಕ್ರಮ ಕೈಗೊಳ್ಳುವಂತೆ ಮೇಸೆಜ್ ಫೋಸ್ಟ್ ಮಾಡಿದ್ದರು.
ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಂಪಿಗೆಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 153ಎ( ಧರ್ಮ,ಬಣ್ಣ, ಹುಟ್ಟಿದ ಸ್ಥಳ, ನಿವಾಸ, ಭಾಷೆ ಮತ್ತಿತರ ಆಧಾರದ ಮೇಲೆ ಬೇರೆ ಬೇರೆ ಧರ್ಮಗಳ ನಡುವೆ ದ್ವೇಷಕ್ಕೆ ಪ್ರಚೋದನೆ) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ. ಕ್ಲಬ್ ಹೌಸ್ ಪ್ರೊಫೈಲ್ ಬಗ್ಗೆ ಪೊಲೀಸರು ಮಾಹಿತಿ ಪಡೆಯಲಿದ್ದಾರೆ. ಇದರಲ್ಲಿ ತೊಡಗಿರುವವರು ಸ್ಥಳೀಯರಾಗಿದ್ದು, ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿ ಹೇಳಿದ್ದಾರೆ.
Advertisement