ಕೃಷಿಕರ ಆರ್ಥಿಕ ಹೊರೆ ತಗ್ಗಿಸಲು 'ರೈತ ಶಕ್ತಿ ಯೋಜನೆ' ಜಾರಿಗೆ: ಬಿ.ಸಿ. ಪಾಟೀಲ್
ಬೆಂಗಳೂರು: ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಮುಂದಾಗಿದ್ದು, ಮುಂದಿನ ತಿಂಗಳು ರೈತ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ರೈತರ ಮೇಲಿನ ಆರ್ಥಿಕ ಹೊರೆಯನ್ನು ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ, ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ರಾಜ್ಯದಲ್ಲಿ ಮೊದಲ ಬಾರಿಗೆ ರೈತ ಶಕ್ತಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಪ್ರತಿ ಎಕರೆಗೆ ರೂ.250 ಗಳಂತೆ ಗರಿಷ್ಠ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್ ಗೆ ಸಹಾಯಧನ ನೀಡಲು ರೈತ ಶಕ್ತಿ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.
Fruits ಪೋರ್ಟಲ್ ನಲ್ಲಿ ನೋಂದಣಿಗೊಂಡ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ರೈತರು ಹೊಂದಿರುವ ಭೂ ಹಿಡುವಳಿ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ. 250 ರಂತೆ ಗರಿಷ್ಠ ಐದು ಎಕರೆಗೆ ರೂ. 1250 ವರೆಗೆ ಡೀಸೆಲ್ ಸಹಾಯಧನವನ್ನು ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಅರ್ಹ ರೈತರಿಗೆ ಡೀಸೆಲ್ ಸಹಾಯಧನದ ಮೊತ್ತವನ್ನು ಸರ್ಕಾರದ ಡಿಬಿಟಿ ಮೂಲಕ ಸೀಡೆಡ್ ಬ್ಯಾಂಕ್, ಅಂಚೆ ಕಚೇರಿ ಖಾತೆಗೆ ವರ್ಷಕ್ಕೊಮ್ಮೆ ವರ್ಗಾಯಿಸಲಾಗುವುದು, ರೈತರು ನಿಯಮಾನುಸಾರ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ