ರದ್ದಾದ ಎಸಿಬಿ ಮುಂದಿದ್ದ ಭ್ರಷ್ಟಾಚಾರ ತಡೆ ಕಾಯ್ದೆಯಡಿ 1,000ಕ್ಕೂ ಹೆಚ್ಚು ಪ್ರಕರಣಗಳು ನೆನೆಗುದಿಗೆ

ಈಗ ರದ್ದಾಗಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮುಂದೆ ಬಾಕಿ ಇರುವ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ 1,000ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ಇದೀಗ ನೆನೆಗುದಿಗೆ ಬಿದ್ದಿವೆ.
ಕರ್ನಾಟಕ ಲೋಕಾಯುಕ್ತ
ಕರ್ನಾಟಕ ಲೋಕಾಯುಕ್ತ
Updated on

ಬೆಂಗಳೂರು: ಈಗ ರದ್ದಾಗಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮುಂದೆ ಬಾಕಿ ಇರುವ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ 1,000ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ಇದೀಗ ನೆನೆಗುದಿಗೆ ಬಿದ್ದಿವೆ. ಆಗಸ್ಟ್ 11 ರಂದು ಕರ್ನಾಟಕ ಹೈಕೋರ್ಟ್ ಹೊರಡಿಸಿದ ನಿರ್ದೇಶನಗಳ ಪ್ರಕಾರ ರಾಜ್ಯ ಸರ್ಕಾರವು ಎಸಿಬಿಯಲ್ಲಿನ ಪ್ರಕರಣಗಳು ಮತ್ತು ಸಿಬ್ಬಂದಿಯನ್ನು ಕರ್ನಾಟಕ ಲೋಕಾಯುಕ್ತಕ್ಕೆ ಇನ್ನೂ ವರ್ಗಾಯಿಸಿಲ್ಲ. ಹೀಗಾಗಿ ಪ್ರಕರಣಗಳ ತನಿಖೆ ಮೇಲೆ ಪರಿಣಾಮ ಬೀರಿದೆ.

ಪ್ರಕರಣಗಳ ವಿಚಾರಣೆಯ ವಿಳಂಬದಿಂದಾಗಿ ಸಾಕ್ಷ್ಯಗಳನ್ನು ತಿರುಚುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದು, ಇದು ಪ್ರಕರಣಗಳ ವಿಚಾರಣೆ ಮೇಲೆ ಪರಿಣಾಮ ಬೀರುತ್ತದೆ.

2016 ರಿಂದ ಜೂನ್ 2022 ರ ಅವಧಿಯಲ್ಲಿ ಎಸಿಬಿ 2,121 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಪೈಕಿ 1,034 ಪ್ರಕರಣಗಳು ಬಾಕಿ ಉಳಿದಿವೆ.

ಎಸಿಬಿಯನ್ನು 2016ರಲ್ಲಿ ಸ್ಥಾಪಿಸಿದಾಗ, ಇದರಲ್ಲಿ ಒಬ್ಬರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, 1 ಪೊಲೀಸ್ ಮಹಾನಿರೀಕ್ಷಕರು, 10 ಪೊಲೀಸ್ ವರಿಷ್ಠಾಧಿಕಾರಿಗಳು, 35 ಪೊಲೀಸ್ ಉಪ ವರಿಷ್ಠಾಧಿಕಾರಿಗಳು, 75 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 200 ಹೆಡ್ ಕಾನ್‌ಸ್ಟೆಬಲ್‌ಗಳು/ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿದಂತೆ 322 ಹುದ್ದೆಗಳನ್ನು ಹೊಂದಿತ್ತು.

ಎಸಿಬಿ ರಚನೆಯ ಸಂದರ್ಭದಲ್ಲಿ ನೀಡಲಾಗಿದ್ದ ಲೋಕಾಯುಕ್ತದಿಂದ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣಗಳನ್ನು ನಿರ್ವಹಿಸುವ ಅಧಿಕಾರವನ್ನು ಹಿಂಪಡೆಯುವ ಅಧಿಸೂಚನೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಆಗಸ್ಟ್ 11 ರಂದು ಎಸಿಬಿ ಮುಂದಿರುವ ಎಲ್ಲಾ ವಿಚಾರಣೆಗಳು, ತನಿಖೆಗಳು ಮತ್ತು ಇತರ ಶಿಸ್ತಿನ ಪ್ರಕ್ರಿಯೆಗಳನ್ನು ವರ್ಗಾಯಿಸಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಅಲ್ಲದೆ, 'ಈತನಕ ಎಸಿಬಿ ನಡೆಸಿರುವ ತನಿಖೆ, ವಿಚಾರಣೆ ಮತ್ತು ಶಿಸ್ತುಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನೀಡಿರುವ ಶಿಕ್ಷೆ ಅಥವಾ ಬಿಡುಗಡೆಯ ಆದೇಶಗಳನ್ನು ಎಸಿಬಿ ಆದೇಶಕ್ಕೆ ಅನುಗುಣವಾಗಿ ಕಾಪಾಡಿಕೊಂಡು ಹೋಗಬೇಕು ಮತ್ತು ಎಸಿಬಿ ಮುಂದಿದ್ದ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಈಗ ಅವು ಯಾವ ಹಂತದಲ್ಲಿವೆಯೋ ಅಲ್ಲಿಂದ ಮುಂದುವರಿಸಿಕೊಂಡು ಹೋಗಬೇಕು’ ಎಂದು ನಿರ್ದೇಶಿಸಿದೆ.

ಪ್ರಕರಣಗಳ ವಿಚಾರಣೆಯ ವಿಳಂಬದಿಂದಾಗಿ ಸೂಕ್ಷ್ಮ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಲ್ಪಡುವ ಅಪಾಯವಿದೆ ಎಂದು ಒಪ್ಪಿಕೊಂಡ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, 'ವಿಳಂಬ ಸರಿಯಲ್ಲ ಮತ್ತು ಸಮಯೋಚಿತ ಕ್ರಮದ ಅಗತ್ಯವಿದೆ. ಹೈಕೋರ್ಟ್ ಆದೇಶವನ್ನು ಪಾಲಿಸುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಎಸಿಬಿಯಲ್ಲಿನ ಪ್ರಕರಣಗಳು ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ನಮ್ಮ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಯವರನ್ನೂ ಭೇಟಿ ಮಾಡಿದ್ದಾರೆ. ಪ್ರಕರಣಗಳು ಹಾಗೂ ಸಿಬ್ಬಂದಿ ವರ್ಗಾವಣೆಗೆ ಸಿದ್ಧತೆ ನಡೆಸುತ್ತಿರುವುದಾಗಿ ಮುಖ್ಯ ಕಾರ್ಯದರ್ಶಿ ನಮಗೆ ತಿಳಿಸಿದ್ದಾರೆ. ಶೀಘ್ರದಲ್ಲಿ ಅದು ನೆರವೇರಲಿದೆ ಎಂದು ಆಶಿಸುತ್ತೇವೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com