ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಈ ಹಿಂದಿನ ಸರ್ಕಾರ 2016ರಲ್ಲಿ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಗೊಳಿಸಿದ್ದು, ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತ ಸಂಸ್ಥೆಗೆ ನೀಡಿದೆ.
ಎಸಿಬಿಯ ಸಂವಿಧಾನವನ್ನು ಪ್ರಶ್ನಿಸಿ ಬೆಂಗಳೂರಿನ ವಕೀಲ ಚಿದಾನಂದ ಅರಸ್, ವಕೀಲರ ಸಂಘ ಮತ್ತು ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆಗೆ ಅಂಗೀಕರಿಸಿತ್ತು. 2016ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರವು ಎಸಿಬಿ ರಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಅಧಿಕಾರವನ್ನು ಕರ್ನಾಟಕ ಲೋಕಾಯುಕ್ತದಿಂದ ಹಿಂಪಡೆದು ಹೊರಡಿಸಿದ ಅಧಿಸೂಚನೆಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಹೌದು.. ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ರದ್ದು ವಿಚಾರಕ್ಕೆ ಸಂಬಂಧಿಸಿ ಎಸಿಬಿ ರಚನೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಂಬಂಧ ಇಂದು ತೀರ್ಪು ಪ್ರಕಟಗೊಂಡಿದ್ದು, ಹೈಕೋರ್ಟ್ ಎಸಿಬಿ ರಚನೆ ಆದೇಶ ರದ್ದುಪಡಿಸಿದೆ. ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನವನ್ನು ರದ್ದುಪಡಿಸಿ ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಹೇಮಲೇಖಾರವರಿದ್ದ ಪೀಠ ತೀರ್ಪು ನೀಡಿದೆ. ಅಂತೆಯೇ ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಆದೇಶ ಹೊರಡಿಸಿದೆ.
ಲೋಕಾಯುಕ್ತ ಬಲವರ್ಧನೆಗೆ ಕ್ರಮ ಕೈಗೊಳ್ಳಿ
ಇದೇ ವೇಳೆ ಎಸಿಬಿ ತನ್ನ ವ್ಯಾಪ್ತಿಯಲ್ಲಿರುವ ಪ್ರಕರಣಗಳು ಮತ್ತು ಅಧಿಕಾರಿಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲು ಹೈಕೋರ್ಟ್ ನಿರ್ದೇಶನ ನೀಡಿದ್ದು, ಅವರು ಆ ಪ್ರಕರಣಗಳನ್ನು ಮುಂದೆ ಕೈಗೆತ್ತಿಕೊಳ್ಳಬೇಕು ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಲು ಆ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಅಂತೆಯೇ ಸಾರ್ವಜನಿಕರ ಹಿತದೃಷ್ಟಿಯಿಂದ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಮತ್ತು ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರಾಗಿ ಸಮರ್ಥ ವ್ಯಕ್ತಿಯನ್ನು ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ
ಇನ್ನು ಹೈಕೋರ್ಟ್ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ಮರುಸ್ಥಾಪಿಸಿದೆ. ಎಲ್ಲಾ ಪ್ರಕರಣಗಳೂ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡಿ ಆದೇಶಿಸಿದೆ. ಅಲ್ಲದೆ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ. ಮೂರು ವರ್ಷದ ಅವಧಿಗೆ ಅಧಿಕಾರಿಗಳ ನೇಮಕವಾಗಬೇಕು. ಲೋಕಾಯುಕ್ತರ ನೇಮಕ ವೇಳೆ ಅರ್ಹತೆ ಪರಿಗಣಿಸಬೇಕು. ಜಾತಿ ಆಧರಿಸಿ ಲೋಕಾಯುಕ್ತ, ಉಪಲೋಕಾಯುಕ್ತ ನೇಮಕವಾಗಬಾರದು ಎಂದು ಹೇಳಿದೆ.
ಅಂತೆಯೇ ಭ್ರಷ್ಟಾಚಾರದಲ್ಲಿ ತೊಡಗಿರುವವರು ಯಾವುದೇ ಕಾರಣಕ್ಕೂ ಪಾರಾಗಬಾರದು. ಹೀಗಾಗಿ ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸಬೇಕು. ಪ್ರಸ್ತುತ ಎಸಿಬಿ ತನಿಖೆ ಮಾಡುತ್ತಿರುವ ಪ್ರಕರಣಗಳು ಲೋಕಾಯುಕ್ತ ವ್ಯಾಪ್ತಿಯಲ್ಲಿ ತನಿಖೆಯಾಗಬೇಕು ಎಂದು ಸರ್ಕಾರದ ಆದೇಶ ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಎಸಿಬಿ ರಚನೆ ಸಮರ್ಥಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲ
ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಲು ಅಧಿಸೂಚನೆ ಹೊರಡಿಸಿದ್ದು ಏಕೆ? ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣಗಳ ತನಿಖೆಗೆ ಲೋಕಾಯುಕ್ತದಿಂದ ಅಧಿಕಾರವನ್ನು ಏಕೆ ಹಿಂತೆಗೆದುಕೊಂಡಿದೆ ಎಂಬುದನ್ನು ಸಮರ್ಥಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯ ಟೀಕಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2016 ರಲ್ಲಿ ಎಸಿಬಿ ರಚಿಸಿತು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತದೊಂದಿಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಅಧಿಕಾರವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದರೂ, ಬಿಜೆಪಿ ಸರ್ಕಾರ ತನ್ನ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಮತ್ತೊಂದೆಡೆ, ಅಧಿಕಾರಕ್ಕೆ ಬಂದರೆ ಲೋಕಾಯುಕ್ತದಿಂದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಅಧಿಕಾರವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದ ಜೆಡಿಎಸ್, ಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರಕ್ಕೆ ಬಂದರೂ ಅದನ್ನು ಮಾಡಿರಲಿಲ್ಲ.
Advertisement