ಜಾವೆಲಿನ್ ಥ್ರೋ
ಜಾವೆಲಿನ್ ಥ್ರೋ

ಗುರಿ ತಪ್ಪಿದ ಜಾವೆಲಿನ್; ವಿದ್ಯಾರ್ಥಿ ತಲೆ ಹೊಕ್ಕ ಭರ್ಚಿ, ಜೀವ ಉಳಿಸಿದ ನಿಮ್ಹಾನ್ಸ್ ವೈದ್ಯರು

ಅಭ್ಯಾಸ ನಿರತ ವಿದ್ಯಾರ್ಥಿ ಎಸೆದ ಜಾವೆಲಿನ್‌ (ಭರ್ಚಿ) ಅಲ್ಲಿಯೇ ಇದ್ದ ವಿದ್ಯಾರ್ಥಿಯೊಬ್ಬನ ತಲೆಗೆ ಹೊಕ್ಕಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ಅಭ್ಯಾಸ ನಿರತ ವಿದ್ಯಾರ್ಥಿ ಎಸೆದ ಜಾವೆಲಿನ್‌ (ಭರ್ಚಿ) ಅಲ್ಲಿಯೇ ಇದ್ದ ವಿದ್ಯಾರ್ಥಿಯೊಬ್ಬನ ತಲೆಗೆ ಹೊಕ್ಕಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಮಧುಗಿರಿ ಪಟ್ಟಣದ ಪಟ್ಟಣದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುತ್ತಿದ್ದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಅಭ್ಯಾಸ ನಿರತನಾಗಿದ್ದ ವಿದ್ಯಾರ್ಥಿ ಎಸೆದ ಜಾವೆಲಿನ್‌ (ಭರ್ಚಿ) ಅಲ್ಲಿಯೇ ಇದ್ದ ವಿದ್ಯಾರ್ಥಿಯೊಬ್ಬನ ತಲೆಗೆ ಹೊಕ್ಕಿದೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಇಂದ್ರೇಶ್‌ನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ನಿಮ್ಹಾನ್ಸ್ ವೈದ್ಯರು ವಿದ್ಯಾರ್ಥಿಯ ಪ್ರಾಣ ಉಳಿಸಿದ್ದಾರೆ.

ಗಾಯಾಳು ವಿದ್ಯಾರ್ಥಿ ಈತ ಮಧುಗಿರಿಯ ಜೂಪಿಟರ್ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಕ್ರೀಡಾಂಗಣದಲ್ಲಿ ಭರ್ಚಿ ಎಸೆತದ (ಜಾವೆಲಿನ್ ಥ್ರೋ) ತರಬೇತಿ ಪಡೆಯುತ್ತಿದ್ದ ಕಾರ್ಡಿಯಲ್ ಶಾಲೆಯ ವಿದ್ಯಾರ್ಥಿ ವೇಗವಾಗಿ ಎಸೆದ ಭರ್ಚಿ, ಗುರಿತಪ್ಪಿ ಅಲ್ಲೇ ಕುಳಿತಿದ್ದ ಇಂದ್ರೇಶ್ ತಲೆಗೆ ಹೊಕ್ಕಿದೆ. ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ. ತಕ್ಷಣ ದೈಹಿಕ ಶಿಕ್ಷಣ ಶಿಕ್ಷಕ ಪ್ರತಾಪ್ ಹಾಗೂ ಇತರ ವಿದ್ಯಾರ್ಥಿಗಳು ಆತನನ್ನು ತಾಲ್ಲೂಕು ಆಸ್ಪತ್ರೆಗೆ ಕೊರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ವೈದ್ಯರ ಸೂಚನೆಯಂತೆ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದೊಯ್ದಿದ್ದಾರೆ.

ನಿಮ್ಹಾನ್ಸ್ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅವರ ಜೀವವನ್ನು ಉಳಿಸಿದ್ದು, ಗಾಯಾಳು ವಿದ್ಯಾರ್ಥಿಯ ನರಗಳಿಗೆ ಹಾನಿಯಾಗಿರುವುದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅದೃಷ್ಟವಶಾತ್, ಅವರ ಮೆದುಳಿಗೆ ಯಾವುದೇ ಗಾಯವಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಗಾಯಾಳು ವಿದ್ಯಾರ್ಥಿ ಡಿಸ್ಕಸ್ ಥ್ರೋ ಆಟಗಾರನಾಗಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದರು. ಹೋಬಳಿ ಮಟ್ಟದ ಕ್ರೀಡಾಕೂಟವು ಪ್ರಗತಿಯಲ್ಲಿದ್ದು, ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.  ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಯಶಸ್ಸಿನ ನಂತರ ಜಾವೆಲಿನ್ ಕ್ರೀಡೆ ವಿದ್ಯಾರ್ಥಿಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ ಶಾಲೆಯ ಸುರಕ್ಷತೆ ಮತ್ತು ಮೇಲ್ವಿಚಾರಣೆಯು ಆತಂಕದ ವಿಷಯವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com