ಬೆಂಗಳೂರು/ರಾಮನಗರ/ಕೊಡಗು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರ ವ್ಯಾಪಾಕ ಮಳೆ ಮುಂದುವರಿದಿದ್ದು, ಆಯಾ ಜಿಲ್ಲೆಗಳ ಪರಿಸ್ಥಿತಿ ನೋಡಿಕೊಂಡು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿವೆ.
ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಾಮನಗರ ತಾಲೂಕಿನ ಪಾಲಭೋವಿದೊಡ್ಡಿ ಗ್ರಾಮದ ಬಳಿ ಜಮೀನು, ಮನೆಗಳು ಜಲಾವೃತಗೊಂಡಿದ್ದು, ರಾಮನಗರ ಪಟ್ಟಣ, ಅರ್ಕೇಶ್ವರ ಕಾಲೋನಿ ಮುಳುಗಡೆಯಾಗಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಮನಗರ, ಚನ್ನಪಟ್ಟಣದಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆಯಾ ಬ್ಲಾಕ್ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಳೆಯ ಆರ್ಭಟಕ್ಕೆ ರಾಮನಗರದ ಹನುಮಂತನಗರದಲ್ಲಿ ರಂಗರಾಯನದೊಡ್ಡಿ ಕೆರೆ ಕೋಡಿ ಬಿದ್ದು ಅಪಾರ ಪ್ರಮಾಣದಲ್ಲಿ ನೀರು ಹರಗೆ ಹರಿದು ಬರುತ್ತಿದೆ. 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಚನ್ನಪಟ್ಟಣದಲ್ಲಿ ಸುರಿದ ಮಳೆಗೆ ಎಲೆಕೇರಿ-ರಾಂಪುರ ರಸ್ತೆ ಜಲಾವೃತಗೊಂಡು 4 ಅಡಿಗೂ ಹೆಚ್ಚು ನೀರು ರಸ್ತೆ ಮೂಲಕ ಹರಿದು ಹೋಗುತ್ತಿದೆ.
ರಾಮನಗರ ತಾಲೂಕಿನಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಬಸವನಪುರ ಗ್ರಾಮದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದರಿಂದಾಗಿ ಮಳೆಯ ನೀರು ಅಂಡರ್ಪಾಸ್ನಲ್ಲಿ ತುಂಬಿಕೊಂಡಿದೆ.
ಮುಂಜಾಗ್ರತೆ ಕ್ರಮವಾಗಿ ಮಂಡ್ಯ ಜಿಲ್ಲೆಯಲ್ಲಿ 10ನೇ ತರಗತಿಯವರೆಗಿನ ಮಕ್ಕಳಿಗೆ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಇಂದು ಧಾರಾಕಾರ ಮಳೆ ಮುಂದುವರಿದಿದೆ. ಸಂಪಾಜೆ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದಾಗಿ ಎರಡು ಕಡೆ ಭೂ ಕುಸಿತ ಉಂಟಾಗಿದೆ. ಮಡಿಕೇರಿ ತಾಲೂಕಿನ ದೇವರಕೊಲ್ಲಿ ಗ್ರಾಮದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಹಿನ್ನೆಲೆ ಸಂಪರ್ಕ ಕಟ್ ಆಗಿದ್ದು, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ವಾಹನಗಳು ನಿಂತಿವೆ. ಮಣ್ಣಿನೊಂದಿಗೆ ರಸ್ತೆ ಮೇಲೆ ಮರಗಳು ಬಂದು ಬಿದಿದ್ದು, ರಸ್ತೆಯಲ್ಲಿ ಬಿದ್ದಿರುವ ಮರವನ್ನು ಪ್ರಯಾಣಿಕರು ತೆರವುಗೊಳಿಸಿದರು.
ಮಳೆಯಿಂದಾಗಿ ಮೈಸೂರು ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ನಂಜನಗೂಡು ತಾಲೂಕಿನ ಆಲಂಬೂರು ಮುಂಟಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ. ಗೌರಮ್ಮ ಬಸವೇಗೌಡ ಎಂಬುವರ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
Advertisement