ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿಗೆ ಸಹಪಾಠಿಗಳಿಂದ ಹಲ್ಲೆ; ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ (Karnataka – Maharashtra Border Row) ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ (Supreme court) ವಿಚಾರಣೆ ಹಂತದಲ್ಲಿರುವಾಗ ಸರ್ಕಾರದ ಮಟ್ಟದಲ್ಲಿ ರಾಜಕೀಯ ನಾಯಕರ ಮಧ್ಯೆ ಇದ್ದ ವಾಕ್ಸಮರ ಇದೀಗ ಕಾಲೇಜು ವಿದ್ಯಾರ್ಥಿಗಳ ಬಡಿದಾಟದ ಮಟ್ಟಕ್ಕೆ ಬಂದಿದೆ.
ವಿದ್ಯಾರ್ಥಿಗೆ ಥಳಿಸಿರುವುದನ್ನು ಖಂಡಿಸಿ  ಟಯರ್ ಹೊತ್ತಿಸಿ ಪ್ರತಿಭಟನೆ
ವಿದ್ಯಾರ್ಥಿಗೆ ಥಳಿಸಿರುವುದನ್ನು ಖಂಡಿಸಿ ಟಯರ್ ಹೊತ್ತಿಸಿ ಪ್ರತಿಭಟನೆ
Updated on

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ (Karnataka – Maharashtra Border Row) ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ (Supreme court) ವಿಚಾರಣೆ ಹಂತದಲ್ಲಿರುವಾಗ ಸರ್ಕಾರದ ಮಟ್ಟದಲ್ಲಿ ರಾಜಕೀಯ ನಾಯಕರ ಮಧ್ಯೆ ಇದ್ದ ವಾಕ್ಸಮರ ಇದೀಗ ಕಾಲೇಜು ವಿದ್ಯಾರ್ಥಿಗಳ ಬಡಿದಾಟದ ಮಟ್ಟಕ್ಕೆ ಬಂದಿದೆ.

ಎರಡು ರಾಜ್ಯಗಳ ಗಡಿ ಪ್ರದೇಶದಲ್ಲಿ ಗ್ರಾಮಗಳ ಸೇರ್ಪಡೆ ಕುರಿತು ಹೋರಾಟ, ಬಸ್​ಗಳ ಮೇಲೆ ಕಪ್ಪು ಮಸಿ ಬಳಸಿ ಬರಹ ಮತ್ತು ಕಲ್ಲು ತೂರಾಟದಂತಹ ಪ್ರಕರಣಗಳು ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮಹಾರಾಷ್ಟ್ರದ ರಾಜಕೀಯ ನಾಯಕರ ಹೇಳಿಕೆಗಳು ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣವಾಗುತ್ತಿದೆ. 

ಭಾಷಾ ವಿವಾದಕ್ಕೆ ಮೊದಲಿನಿಂದಲೂ ಸುದ್ದಿಯಾಗಿರುವ ಗಡಿಜಿಲ್ಲೆ ಬೆಳಗಾವಿಯಲ್ಲಿ (Belagavi) ನಿನ್ನೆ ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳು ಥಳಿಸಿದ ಪ್ರಕರಣ ನಡೆದಿದೆ. 

ಆಗಿದ್ದೇನು: ಬೆಳಗಾವಿಯ ಟಿಳಕವಾಡಿಯಲ್ಲಿನ ಗೋಗಟೆ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನಲ್ಲಿ ಅಂತರ ಕಾಲೇಜು ಉತ್ಸವ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಿಡಿದು ವಿದ್ಯಾರ್ಥಿ ಡ್ಯಾನ್ಸ್​ ಮಾಡಿದ್ದಾನೆ. ಇದನ್ನು ಕಂಡ ಸಹಪಾಠಿಗಳು ಕನ್ನಡ ಬಾವುಟ ಪ್ರದರ್ಶಿಸಿದ ವಿದ್ಯಾರ್ಥಿಗೆ ಥಳಿಸಿದ್ದಾರೆ. ಥಳಿಸಿದ ವಿದ್ಯಾರ್ಥಿಗಳು ಮಹಾರಾಷ್ಟ್ರ ಪರವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡಿಗರ ಆಕ್ರೋಶ, ಇಂದು ಪ್ರತಿಭಟನೆ: ಇದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದು, ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಬೆಳಗಾವಿ ಗೋವಾ ಹೆದ್ದಾರಿಯಲ್ಲಿ ಚಕ್ರಗಳಿಗೆ ಬೆಂಕಿ ಹಚ್ಚಿ ಸುಟ್ಟು, ರಸ್ತೆತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರ ವಿರುದ್ಧ, ಅಲ್ಲಿನ ಸರ್ಕಾರ ವಿರುದ್ಧ ಘೋಷಣೆ ಕೂಗಿದ್ದಾರೆ. ಗಡಿನಾಡು ಕನ್ನಡಿಗರಿಗೆ ಕರ್ನಾಟಕ ಸರ್ಕಾರ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ. 

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ, ಪರಿಶೀಲನೆ
ವಿಚಾರ ತಿಳಿದು ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಡಿಸಿಪಿ ರವೀಂದ್ರ ಗಡಾದಿ,  ಹಲ್ಲೆಗೊಳಗಾದ ವಿದ್ಯಾರ್ಥಿಯಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಈವರೆಗೂ ಪ್ರಕರಣದ ಕುರಿತು ದೂರು ದಾಖಲಾಗಿಲ್ಲ. ಎಲ್ಲರೂ ಅಪ್ರಾಪ್ತರಾಗಿದ್ದು ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಗಲಾಟೆಯಾಗಿದೆ. ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ ಅಂತ ಹೇಳಿದ್ದಾರೆ.

ನಿನ್ನೆ ಸಂಜೆ 7.30ರ ಸುಮಾರಿಗೆ ಗೋಗಟೆ ಕಾಲೇಜಿನಲ್ಲಿ ಇಂಟರ್ ಕಾಲೇಜು ಫೆಸ್ಟ್ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕನ್ನಡದ ಹಾಡು ಪ್ಲೇ ಆಗುತ್ತಿದ್ದಂತೆ ದ್ವಿತೀಯ ಪಿಯು ವಿದ್ಯಾರ್ಥಿ ಕನ್ನಡದ ಧ್ವಜ ಹಿಡಿದು ಡ್ಯಾನ್ಸ್ ಮಾಡಲು ಮುಂದಾಗಿದ್ದಾನೆ.

ವಿದ್ಯಾರ್ಥಿ ಡ್ಯಾನ್ಸ್ ಮಾಡುತ್ತಿರುವಾಗಲೇ ವೇದಿಕೆ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಕೂಡಲೇ ಕಾಲೇಜು ಸಿಬ್ಬಂದಿ ವರ್ಗವನ್ನು ವಿದ್ಯಾರ್ಥಿಗಳನ್ನು ನಿಯಂತ್ರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಹಲ್ಲೆಗೊಳಗಾದ ಮತ್ತು ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಅಪ್ರಾಪ್ತರಾಗಿರುವ ಹಿನ್ನೆಲೆ ಅವರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಇಂದು ಕಾಲೇಜಿಗೆ ಮುತ್ತಿಗೆ
ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಬೆಳಗಾವಿಯ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಹಲ್ಲೆ ಮಾಡಿದ ಮೂವರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಇಂದು ಬೆಳಗ್ಗೆ 9 ಗಂಟೆಗೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಘಟನೆ ಟಿಳಕವಾಡಿಯಲ್ಲಿನ ಗೋಗಟೆ ಕಾಲೇಜಿಗೆ ಮುತ್ತಿಗೆ ಹಾಕಿ, ಹಲ್ಲೆಗೈದ ವಿದ್ಯಾರ್ಥಿಗಳ ಅಮಾನತಿಗೆ ಆಗ್ರಹಿಸಲಿದ್ದಾರೆ.

ಕಾಲೇಜು ಸುತ್ತಮುತ್ತ ಪೊಲೀಸರ ನಿಯೋಜನೆ
ಕನ್ನಡಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಕಾಲೇಜು ಮುಂಭಾಗ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಬೆಳಗಾವಿ ನಗರದ ಸೂಕ್ಷ್ಮ ಪ್ರದೇಶಗಳ ಮೇಲೆಯೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com