ಜಿಟಿ-ಜಿಟಿ ಮಳೆ, ಚಳಿ, ಬೆಂಗಳೂರು ಗಡ-ಗಡ: ತಾಪಮಾನ ಮಟ್ಟ ತೀವ್ರ ಕುಸಿತ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ತಾಪಮಾನ ಹಠಾತ್ ಕುಸಿದಿದೆ. ನಿನ್ನೆಯಿಂದ ಮಾಂಡೌಸ್ ಚಂಡಮಾರುತ ಪ್ರಭಾವದಿಂದ ಚಳಿಯ ಜೊತೆಗೆ ಮಳೆಯೂ ಇರುವುದರಿಂದ ಬೆಂಗಳೂರಿಗರು ಚಳಿಯಲ್ಲಿ ಗಡಗಡ ನಡುಗುತ್ತಿದ್ದಾರೆ.
ನಗರದಲ್ಲಿ ನಿನ್ನೆ 21.6 ಡಿಗ್ರಿ ಸೆಲ್ಸಿಯಸ್‌ನ ಗರಿಷ್ಠ ತಾಪಮಾನ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಅಧಿಕಾರಿಗಳ ಪ್ರಕಾರ, ಈ ವರ್ಷದ ಡಿಸೆಂಬರ್‌ನಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಗರಿಷ್ಠ ತಾಪಮಾನವಾಗಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿನ ವ್ಯತ್ಯಾಸವು ಸುಮಾರು 3 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಕನಿಷ್ಠ ತಾಪಮಾನ 18.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ತಾಪಮಾನವು 18.4 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಇದು ಆ ಸಮಯದಲ್ಲಿ 20 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದ ಚೆನ್ನೈಗಿಂತ ಕಡಿಮೆಯಾಗಿದೆ. ಪುಣೆಯಲ್ಲಿ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅಹಮದಾಬಾದ್‌ನಲ್ಲಿ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೋಲ್ಕತ್ತಾದಲ್ಲಿ, ಆ ಸಮಯದಲ್ಲಿ ತಾಪಮಾನವು 19.4 ಡಿಗ್ರಿ ಸೆಲ್ಸಿಯಸ್, ಮುಂಬೈನಲ್ಲಿ 20.6 ಡಿಗ್ರಿ ಸೆಲ್ಸಿಯಸ್ ಮತ್ತು ಹೈದರಾಬಾದ್ 23.6 ಡಿಗ್ರಿ ಸೆಲ್ಸಿಯಸ್ ಇತ್ತು.
ಭಾರತೀಯ ಹವಾಮಾನ ಇಲಾಖೆ ವೆಬ್‌ಸೈಟ್ ಪ್ರಕಾರ, ಬೆಂಗಳೂರಿನ ನಗರ ಕೇಂದ್ರದಲ್ಲಿ 18.4, ಬಾಪೂಜಿನಗರದಲ್ಲಿ 22.6, ಹೆಬ್ಬಾಳದಲ್ಲಿ 20.4, ಹೊಂಬೇಗೌಡ ನಗರದಲ್ಲಿ 21.1, ಜಯನಗರದಲ್ಲಿ 22.1, ಸಿಲ್ಕ್ ಬೋರ್ಡ್ ರಸ್ತೆಯಲ್ಲಿ 21.6 ಮತ್ತು ಎಚ್‌ಎಎಲ್‌ನಲ್ಲಿ 21.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಮಾಂಡೌಸ್ ಚಂಡಮಾರುತದ ಪ್ರಭಾವದಿಂದಾಗಿ ಗರಿಷ್ಠ ತಾಪಮಾನದಲ್ಲಿ ಕುಸಿತವಾಗಿದೆ ಎಂದು IMD ಅಧಿಕಾರಿಗಳು ತಿಳಿಸಿದ್ದಾರೆ. IMD ತಾಪಮಾನದಲ್ಲಿ ಮತ್ತಷ್ಟು ಕುಸಿತವನ್ನು ಮುನ್ಸೂಚಿಸಿದೆ, ಜೊತೆಗೆ ಮುಂದಿನ ಎರಡು ದಿನಗಳಲ್ಲಿ ಲಘು ಮಳೆ ಮತ್ತು ಮೋಡ ಇರಲಿದೆ.
IMD ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ 2003 ರ ಡಿಸೆಂಬರ್ 17ರಂದು ಚಳಿಗಾಲದಲ್ಲಿ ಗರಿಷ್ಠ 31.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಕಡಿಮೆ ಕನಿಷ್ಠ -- 8.9 ಡಿಗ್ರಿ ಸೆಲ್ಸಿಯಸ್ 1883ರ ಡಿಸೆಂಬರ್ 29ರಂದು ದಾಖಲಾಗಿತ್ತು. ನಿನ್ನೆಯ ತಾಪಮಾನವು ಕಳೆದ ದಶಕದಲ್ಲೇ ಕನಿಷ್ಠವಾಗಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಒಂದು ವಾರದಿಂದ ಹವಾಮಾನ ಇಲಾಖೆಯ ಸರ್ವರ್‌ಗಳು ತಾಂತ್ರಿಕ ದೋಷಗಳನ್ನು ಎದುರಿಸುತ್ತಿರುವುದರಿಂದ ಹವಾಮಾನ ಮೌಲ್ಯಮಾಪನದಲ್ಲಿ ತೊಂದರೆಯುಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ