ಬೆಂಗಳೂರು: ದಕ್ಷಿಣ ಬೆಂಗಳೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ಯುನೈಟೆಡ್ ಬ್ರದರ್ಸ್ ಹೆಲ್ತ್‌ಕೇರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ವ್ಯಾಕ್ಸಿನ್ ಪೂರೈಕೆ ಒಪ್ಪಂದವನ್ನು ರದ್ದುಗೊಳಿಸುವಂತೆ ಮತ್ತು ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನಿಂದ (ಬಿಬಿಐಎಲ್) ಅವಧಿ ಮೀರಿದ ಕೋವ್ಯಾಕ್ಸಿನ್ ಡೋಸ್‌ಗಳ ಪರಿಹಾರವಾಗಿ 1.69 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
'ಈ ನ್ಯಾಯಾಲಯವು ಎರಡು ಖಾಸಗಿ ಸಂಸ್ಥೆಗಳ ನಡುವಿನ ಖಾಸಗಿ ಒಪ್ಪಂದಕ್ಕೆ ಅಡ್ಡಿಪಡಿಸುವ ರಿಟ್ ಅನ್ನು ನೀಡುವುದಿಲ್ಲ. ಅರ್ಜಿದಾರರು(ಆಸ್ಪತ್ರೆ) ಹಣವನ್ನು ವಸೂಲಿ ಮಾಡಲು ಕಾನೂನಿನಲ್ಲಿ ಲಭ್ಯವಿರುವ ಎಲ್ಲಾ ದಾರಿಗಳನ್ನು ಬಳಸಿಕೊಳ್ಳಬೇಕು. ಒಪ್ಪಂದದಿಂದ ಉದ್ಭವಿಸಿರುವ ಸಮಸ್ಯೆಯಲ್ಲಿ ಖಾಸಗಿ ಸಂಸ್ಥೆಗೆ ಮತ್ತೊಂದು ಖಾಸಗಿ ಸಂಸ್ಥೆಯಿಂದ ಹಣವನ್ನು ವಸೂಲಿ ಮಾಡಲು ರಿಟ್ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ' ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೇಳಿದರು.
ಅರ್ಜಿಯ ಪ್ರಕಾರ, ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್, ಅರ್ಜಿದಾರರೊಂದಿಗೆ 25,000 ಡೋಸ್ ಕೋವಾಕ್ಸಿನ್ ಪೂರೈಕೆಗಾಗಿ ಒಪ್ಪಂದ ಮಾಡಿಕೊಂಡಿತ್ತು ಮತ್ತು 2,62,50,000 ರೂ.ಗಳ ಇನ್‌ವಾಯ್ಸ್ ಮೊತ್ತವನ್ನು ಮುಂಗಡವಾಗಿ ಪಾವತಿಸಲು ಒಪ್ಪಿಕೊಂಡಿತ್ತು.
ಋಣಾತ್ಮಕ ಪ್ರಚಾರದ ಕಾರಣದಿಂದಾಗಿ ಕೋವಾಕ್ಸಿನ್ ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿ 2021ರ ಸೆಪ್ಟೆಂಬರ್ 9 ರಿಂದ ಅರ್ಜಿದಾರರು, ಬಿಬಿಐಎಲ್‌ಗೆ ಇ-ಮೇಲ್‌ಗಳನ್ನು ಕಳುಹಿಸಿದ್ದಾರೆ ಮತ್ತು ಫೋನ್ ಕರೆಗಳನ್ನು ಮಾಡಿದ್ದಾರೆ ಎಂದು ವಾದಿಸಲಾಗಿದೆ.
ಬಿಬಿಐಎಲ್‌ನಿಂದ ಅರ್ಜಿದಾರರಿಗೆ ಪೂರೈಸಲಾದ ಸಂಪೂರ್ಣ ಲಸಿಕೆಗಳ ಅವಧಿ ಮುಗಿಯುತ್ತದೆ ಮತ್ತು ಅರ್ಜಿದಾರರಿಗೆ ಪರಿಹಾರ ನೀಡಲು ಅಥವಾ ಲಸಿಕೆಯನ್ನು ಹಿಂಪಡೆಯಲು ಬಿಬಿಐೆಲ್ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ವಾದಿಸಿದೆ.
Advertisement