ರಾಜ್ಯದ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ, ಶೀಘ್ರದಲ್ಲೇ ಚಾಲನೆ: ಸಿಎಂ ಬೊಮ್ಮಾಯಿ
ಹನೂರು: ರಾಜ್ಯದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹನೂರು ಮತ್ತು ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಸಿಎಂ, ಸರ್ಕಾರ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕರ್ನಾಟಕ ರಾಜ್ಯ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ 8,000 ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರಗಳು ತಾವು ಕೈಗೊಂಡ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಯಲ್ಲಿ ಮತ ಕೇಳಬೇಕು ವಿನಃ ಇನ್ನಾವುದೇ ವಿಚಾರದಿಂದಲ್ಲ. ಪ್ರಜಾಪ್ರಭುತ್ವದಲ್ಲಿ ಸಕಾರಾತ್ಮಕ ಹಾಗೂ ರಚನಾತ್ಮಕ ಆಡಳಿತ ನಿರ್ಮಾಣವಾಗಬೇಕೇ ಹೊರತು ಮತ್ತೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸಕ್ಕೆ ಪ್ರಾಧಾನ್ಯತೆ ನೀಡಬಾರದು ಎಂದರು.
ಸರ್ಕಾರಗಳು ತಾವು ಕೈಗೊಂಡ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಯಲ್ಲಿ ಮತ ಕೇಳಬೇಕು ವಿನಃ ಇನ್ನಾವುದೇ ವಿಚಾರದಿಂದಲ್ಲ. ಚಾಮರಾಜನಗರ ಜಿಲ್ಲೆ ಕೆರೆಗಳ ಜಿಲ್ಲೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಯಳಂದೂರು ತಾಲೂಕಿನ ಎಲ್ಲಾ ಕೆರೆ ತುಂಬಿಸುವ ಕಾರ್ಯವನ್ನು ಮೊಟ್ಟಮೊದಲ ಬಾರಿಗೆ ಮಾಡಲಾಯಿತು ಎಂದು ಅವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ