ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಧ್ಯರಾತ್ರಿ ಮನೆಗೆ ಬಂದ ಕಳ್ಳನಿಗೆ ಶೂಟ್ ಮಾಡಿದ ಮಾಲೀಕ

ಕಳ್ಳತನಕ್ಕೆ ಬಂದಿದ್ದ ಬಾಗಲಕೋಟೆ ಮೂಲದ ಕಳ್ಳನ ಮೇಲೆ ಮನೆ ಮಾಲೀಕ ಗುಂಡು ಹಾರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Published on

ಬೆಂಗಳೂರು: ಕಳ್ಳತನಕ್ಕೆ ಬಂದಿದ್ದ ಬಾಗಲಕೋಟೆ ಮೂಲದ ಕಳ್ಳನ ಮೇಲೆ ಮನೆ ಮಾಲೀಕ ಗುಂಡು ಹಾರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕಳ್ಳನೊಬ್ಬ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ.  ಬೆಳಗಿನ ಜಾವ 2:30ರ ಸುಮಾರಿಗೆ ಈ ಘಟನೆ ನಡೆದಿದೆ. ಮನೆ ಮಾಲೀಕ ಕಳ್ಳನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ನಾಯಿಗಳು ಬೊಗಳುವ ಸದ್ದಿಗೆ ಎಚ್ಚರಗೊಂಡ ಮನೆ ಮಾಲೀಕ ಹೊರಗೆ ಬಂದಿದ್ದಾರೆ. ಆಗ ಕಳ್ಳ ಕಂಡಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ.

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಮಧ್ಯರಾತ್ರಿ ಕಳ್ಳತನ ಮಾಡಲು ಬಂದಿದ್ದವನ ಮೇಲೆ ಮನೆ ಮಾಲೀಕ ಗುಂಡು ಹಾರಿಸಿದ್ದಾರೆ. ಮನೆ ಮಾಲೀಕ ವೆಂಕಟೇಶ್ ಎಂಬುವವರು ಬಾಗಲಕೋಟೆ ಮೂಲದ ಲಕ್ಷ್ಮಣ್ ‌ಎಂಬಾತನ ಮೇಲೆ ಗುಂಡಿನ‌ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಳ್ಳತನಕ್ಕೆ ಲಕ್ಷ್ಮಣ್ ಮನೆಗೆ ನುಗ್ಗಿದ್ದ, ಆ ವೇಳೆ ಏನೋ ಸದ್ದಾಗಿದ್ದನ್ನು ಕೇಳಿ ಮನೆ ಮಾಲೀಕ ವೆಂಕಟೇಶ್ ಎದ್ದು ಬಂದಿದ್ದಾರೆ. ಅರ್ಧಂಬರ್ಧ ನಿದ್ದೆ ಮಾಂಪರಿನಲ್ಲಿದ್ದ ವೆಂಕಟೇಶ್‌ಗೆ ಯಾರೋ ಕಳ್ಳತನಕ್ಕೆ ಬಂದಿರುವುದು ಕಂಡು ಬಂದಿದೆ.

ಕೂಡಲೇ ರೂಮಿನೊಳಗೆ ಹೋಗಿ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ, ಅದರಲ್ಲಿ ಆರೋಪಿ ಕಂಪೌಂಡ್ ಗೋಡೆ ಹಾರಿ ಮನೆಗೆ ಬರುತ್ತಿರುವುದು ಕಂಡು ಬಂದಿದೆ. ಕೂಡಲೇ ಬಂದೂಕು ತಂದವರೇ ಗುಂಡು ಹಾರಿಸಿದ್ದು, ಲಕ್ಷ್ಮಣನ ಕಾಲಿಗೆ ಗಾಯವಾಗಿದೆ. ಬಳಿಕ ಆತನನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿದ್ದರು. ತರುವಾಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಅವರು ಸ್ಥಳಕ್ಕೆ ಸಂಪಿಗೆಹಳ್ಳಿ ಪೊಲೀಸರು ಬಂದು ಗಾಯಗೊಂಡಿರುವ ಲಕ್ಷ್ಮಣನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

“ನಾನು 2006 ರಲ್ಲಿ ಬಂದೂಕಿಗೆ ಪರವಾನಗಿ ಪಡೆದಿದ್ದೇನೆ. ನಾನು ಗ್ಯಾಸ್ ಕಟ್ಟರ್ ತರುತ್ತಿರುವ ವ್ಯಕ್ತಿಯನ್ನು ಸಿಸಿಟಿವಿಯಲ್ಲಿ ನೋಡಿದೆ.  ಆತ ಕಾಂಪೌಂಡ್ ಗೋಡೆ ಏರಿ ಮನೆ ಪರಿಶೀಲಿಸುತ್ತಿದ್ದ. ನಾನು ಅಪಾಯವನ್ನು ತೆಗೆದುಕೊಳ್ಳಲು ಬಯಸಲಿಲ್ಲ. ಆರೋಪಿಯ ಜೊತೆಯಲ್ಲಿ ಆತನ ಸಹಚರರು ಇರಬಹುದು ಎಂದು ನನಗೆ ಅನಿಸಿತು. ಆರೋಪಿಗಳು ಒಳಗೆ ನುಗ್ಗಬಹುದು ಎಂಬ ಭಯ ನನಗಿತ್ತು. ಮನೆಯಲ್ಲಿ ಹೆಂಗಸರು ಇದ್ದರು. ನಾನು ಕಳ್ಳನ ಕಾಲಿಗೆ ಒಂದು ಸುತ್ತು ಹೊಡೆದೆ. ಕುಸಿದು ಬಿದ್ದ ಎಂದು ವೆಂಕಟೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಯು ತನ್ನ ಸಹಚರರೊಂದಿಗೆ ಕಳ್ಳತನ ಮಾಡಲು ಬಂದಿದ್ದಾನಾ ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಖಚಿತವಾಗಿಲ್ಲ. ಮನೆ ಮಾಲೀಕರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕಳ್ಳನ ವಿರುದ್ಧ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ (ಈಶಾನ್ಯ) ಅನೂಪ್ ಎ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com