ವಿದ್ಯಾರ್ಥಿ ಭರತ್ ಬಾರ್ಕರ್ ಹತ್ಯೆ ಪ್ರಕರಣ: ಹದ್ಲಿ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

2,500 ಜನಸಂಖ್ಯೆಯುಳ್ಳ ಗದಗ ಜಿಲ್ಲೆಯ ಹದ್ಲಿ ಗ್ರಾಮದಲ್ಲಿ ವಿದ್ಯಾರ್ಥಿ ಭರತ್ ಬಾರ್ಕರ್ ಹತ್ಯೆ ಘಟನೆ ಬಳಿಕ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಥಳಿತಕ್ಕೊಳಗಾದ ಶಿಕ್ಷಕ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಥಳಿತಕ್ಕೊಳಗಾದ ಶಿಕ್ಷಕ.
Updated on

ಹದ್ಲಿ (ಗದಗ): 2,500 ಜನಸಂಖ್ಯೆಯುಳ್ಳ ಗದಗ ಜಿಲ್ಲೆಯ ಹದ್ಲಿ ಗ್ರಾಮದಲ್ಲಿ ವಿದ್ಯಾರ್ಥಿ ಭರತ್ ಬಾರ್ಕರ್ ಹತ್ಯೆ ಘಟನೆ ಬಳಿಕ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ವಿದ್ಯಾರ್ಥಿ ಹತ್ಯೆ ಬಳಿಕ ಶಾಲೆಗೆ ರಜೆ ಘೋಷಿಸಲಾಗಿದ್ದು, ಬಾಲಕನ ಮೇಲಿನ ಹಲ್ಲೆಯನ್ನು ಕಂಡ ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ.

ಇನ್ನು ಪೋಷಕರಲ್ಲೂ ಕೂಡ ಆತಂಕ ಹೆಚ್ಚಾಗಿದ್ದು, ಪೊಲೀಸರು ಎಲ್ಲಿ ತಮ್ಮ ಮಕ್ಕಳನ್ನು ವಿಚಾರಣೆಗೊಳಪಡಿಸುತ್ತಾರೋ ಎಂಬ ಭಯದಲ್ಲಿ ಮಕ್ಕಳನ್ನು ಕೆಲ ದಿನಗಳ ಕಾಲ ಶಾಲೆಗೆ ಕಳುಹಿಸದಿರಲು ನಿರ್ಧರಿಸಿದ್ದಾರೆ.

ಸೋಮವಾರ ವಿದ್ಯಾರ್ಥಿ ಹತ್ಯೆಯಾದ ಘಟನೆ ಬಳಿಕ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ಮುತ್ತಪ್ಪ ಹಗಡಲಿ ಎಂಬ ಶಿಕ್ಷಕ, ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ ಎಂಬ ಬಾಲಕನಿಗೆ ಅಮಾನವೀಯವಾಗಿ ಥಳಿಸಿ, ಮಹಡಿಯಿಂದ ಕೆಳಗೆ ಎಸೆದಿದ್ದ. ಘಟನೆಯಲ್ಲಿ ಬಾಲಕ ಸಾವನ್ನಪ್ಪಿದ್ದ.

ಇದೇ ಶಾಲೆಯಲ್ಲಿಯೇ ಬಾಲಕನ ತಾಯಿ ಗೀತಾ ಅವರೂ ಕೂಡ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಿಕ್ಷಕ ಮುತ್ತಪ್ಪ ಹಗಡಲಿ ಜೊತೆಗೆ ಆರಂಭದಲ್ಲಿ ಗೀತಾ ಅವರು ಆಪ್ತರಂತೆ ಮಾತನಾಡುತ್ತಿದ್ದರು. ಆದರೆ, ನಂತರ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಎದುರಾಗಿ ಮಾತನಾಡುವುದನ್ನು ಬಿಟ್ಟಿದ್ದಾರೆ. ಈ ನಡುವೆ ಗೀತಾ ಅವರು ಸಹಶಿಕ್ಷಕ ಸಂಗನಗೌಡ ಪಾಟೀಲ ಅವರೊಂದಿಗೆ ಮಾತನಾಡಲು ಶುರು ಮಾಡಿದ್ದು, ಇದರಿಂದ ಹಡಗಲಿ ಕೆಂಡಾಮಂಡಲಗೊಂಡು, ಈ ಕೋಪವನ್ನು ಶಿಕ್ಷಕಿ ಗೀತಾ ಅವರ ಪುತ್ರ ಭರತ್ ಮೇಲೆ ತೀರಿಸಿಕೊಂಡಿದ್ದಾನೆ.

ಬಾಲಕನಿಗೆ ಥಳಿಸುತ್ತಿರುವುದನ್ನು ಕಂಡ ಗೀತಾ ಹಾಗೂ ಸಂಗನಗೌಡ ಅವರು ಮಧ್ಯೆ ಪ್ರವೇಶಿಸಿದ್ದು, ಬಾಲಕನನ್ನು ಬಿಡಿಸಲು ಯತ್ನಿಸಿದ್ದಾರೆ. ಆದರೆ, ಬಾಲಕನನ್ನು ಮಹಡಿಯಿಂದ ಕೆಳಗೆ ಎಸೆದ ಹಡಗಲಿ ಇಬ್ಬರಿಗೂ ಥಳಿಸಿದ್ದಾನೆ.

ಭರತ್ ಕಿರುಚಾಡುವುದನ್ನು ಕೇಳಿ ನಾವು ಹೊರಗೆ ಬಂದಿದ್ದೆವು. ಈ ವೇಳೆ ಶಿಕ್ಷ ಮುತ್ತಪ್ಪ ಹಗಡಲಿ ಅವರು ಬಾಲಕನಿಗೆ ತೀವ್ರವಾಗಿ ಥಳಿಸಿ ಮೊದಲ ಮಹಡಿಯಿಂದ ಕೆಳಗೆ ಎಸೆದಿದ್ದರು ಎಂದು ಶಾಲೆಯ ಸುತ್ತಮುತ್ತಲಿನ ನಿವಾಸಿಗಳು ಹೇಳಿದ್ದಾರೆ. ಈ ನಡುವೆ ತರಗತಿಯಲ್ಲಿದ್ದ ಇತರೆ ವಿದ್ಯಾರ್ಥಿಗಳೂ ಕೂಡ ಹೊರಗೆ ಬಂದಿದ್ದು, ಶಿಕ್ಷಕನ ಈ ಅಮಾನವೀಯ ವರ್ತನೆಗೆ ಸಾಕ್ಷಿಯಾಗಿದ್ದಾರೆ.

ಬಾಲಕನ ತಾಯಿ ಗೀತಾ ಹಾಗೂ ಶಿಕ್ಷಕ ಹಡಗಲಿ ಫೋನ್ ನಲ್ಲಿ ಚಾಟ್ ಮಾಡುತ್ತಿದ್ದರೆಂದು ತಿಳಿದುಬಂದಿದ್ದು, ಈ ಚಾಟ್ ನ್ನು ಪರಿಶೀಲಿಸಿದ ಪೊಲೀಸರಿಗೆ ಸಾಮಾನ್ಯವಾಗಿ ಮಾತನಾಡಿರುವುದು ಕಂಡು ಬಂದಿದೆ.

ಇತ್ತೀಚೆಗಷ್ಟೇ ಗೀತಾ ಹಾಗೂ ಹಡಗಲಿ ನಡುವೆ ಮನಸ್ತಾಪಗಳು ಶುರುವಾಗಿದ್ದು, ಇಬ್ಬರೂ ಮಾತನಾಡುವುದನ್ನು ನಿಲ್ಲಿಸಿದ್ದರು. ಕಳೆದ ವಾರ ಶ್ರೀಶೈಲಂಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿತ್ತು.  ವೇಳೆ ಇಬ್ಬರೂ ಮಾತನಾಡದೇ ಇರುವುದು ಕಂಡು ಬಂದಿತ್ತು. ಇಬ್ಬರೂ ಕಿತ್ತಾಡಿಕೊಂಡಿದ್ದನ್ನು ಭರತ್ ನೋಡಿದ್ದು, ಭರತ್ ಮೇಲೆ ಹಗಡಲಿ ಕೋಪಗೊಂಡಿದ್ದ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.

ಗೀತಾ ಅವರ ತಾಯಿ ರತ್ನವ್ವ ಅವರು ಮಾತನಾಡಿ, ಕುಟುಂಬಕ್ಕೆ ಭರತ್ ಭರವಸೆಯಾಗಿದ್ದ. ಬಹಳ ಪ್ರತಿಭಾವಂತ, ಬುದ್ಧಿವಂತ ಬಾಲಕನಾಗಿದ್ದ. ಸರ್ಕಾರಿ ಅಧಿಕಾರಿಯಾಗುತ್ತಾನೆಂಬ ಕನಸು ಕಂಡಿದ್ದೆವು. ಆದರೆ, ಹಣೆಬರಹ ಬೇರೆಯೇ ಆಗಿತ್ತು ಎಂದು ಕಣ್ಣೀರು ಹಾಕಿದ್ದಾರೆ.

ಶಿಕ್ಷಕನೇಕೆ ಇಂತರ ಕ್ರೂರ ವರ್ತನೆ ತೋರಿದ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಮಗಳು ನಮ್ಮೊಂದಿಗೆ ಏನನ್ನೂ ಹೇಳುತ್ತಿರಲಿಲ್ಲ. ಆತ ಕಿರುಕುಳ ನೀಡುತ್ತಿದ್ದಾನೆಂದು ಹೇಳಿಕೊಂಡಿದ್ದೇ ಆದರೆ, ಆತನೊಂದಿಗೆ ನಾವು ಮಾತನಾಡುತ್ತಿದ್ದೆವು. ನನ್ನ ಮೊಮ್ಮಗ ಯಾವ ತಪ್ಪನ್ನೂ ಮಾಡಿಲ್ಲ. ಆದರೆ, ಶಿಕ್ಷಕ ಅಮಾನವೀಯವಾಗಿ ಸಾಯಿಸಿದ್ದಾನೆಂದು ಹೇಳಿದ್ದಾರೆ.

ಇದೀಗ ಬಾಲಕನ ತಾಯಿ ಹಾಗೂ ಶಿಕ್ಷಕಿ ಗೀತಾ ಬಾರ್ಕರ್ ಅವರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com