ಬೆಂಗಳೂರು: ವಿಧಾನಸಭಾ ಚುನಾವಣಾ ಸನ್ನಿಹದಲ್ಲಿರುವಂತೆಯೇ ಉತ್ತರ ಕರ್ನಾಟಕ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಕಳಸಾ- ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಶಕ್ತಿ ಆಯೋಗ ಅನುಮತಿ ನೀಡಿದೆ. ಇದರೊಂದಿಗೆ ಯೋಜನೆಯ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ಇದೀಗ ಪೈಪೋಟಿ ಶುರುವಾಗಿದೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಾದಾಯಿ ಯೋಜನೆಯನ್ನು 1988ರಲ್ಲಿ ಆರಂಭಿಸಿದ್ದರು. ಆದರೇ ಆ ನಂತರ ಗೋವಾದಲ್ಲಿ ಬಂದ ಸರ್ಕಾರಗಳ ವಿರೋಧದಿಂದ ಈ ಯೋಜನೆ ಕುಂಟುತ್ತಾ ಸಾಗಿತ್ತು . 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ಯೋಜನೆಗೆ ಬದ್ಧತೆ ಪ್ರಾರಂಭಿಸುವುದರೊಂದಿಗೆ ಇದೀಗ ಆ ಕನಸು ನನಸು ಆಗುವ ಕಾಲ ಬಂದಿದ್ದು, ಉತ್ತರ ಕರ್ನಾಟಕದ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಹೇಳಿದರು.
ಮತ್ತೊಂದೆಡೆ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿಗೆ ಬದ್ಧ. ಉತ್ತರ ಕರ್ನಾಟಕ ಭಾಗದ ಜನರ ದಾಹ ನೀಗಿಸಲು ಮಹದಾಯಿ ನದಿಯಿಂದ 3.9 ಟಿಎಂಸಿ ನೀರನ್ನು ಒದಗಿಸಲಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ₹500 ಕೋಟಿ ಅನುದಾನ ನೀಡಲಿದೆ. ಮಹದಾಯಿ ನದಿ ತಿರುವು ಯೋಜನೆಗೆ ನಿಗದಿತ ಸಮಯಕ್ಕೆ ₹3000 ಕೋಟಿ ಬಿಡುಗಡೆ ಮಾಡಲಿದೆ. ಪ್ರಗತಿ ಮತ್ತು ಕಾಂಗ್ರೆಸ್‌ನ ಸಮಯ ಆರಂಭ ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ. ನೀಡುವುದಾಗಿ ಯಾಮಾರಿಸಿದ ಬಿಜೆಪಿ ಸರ್ಕಾರ ಈಗ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ಹೆದರಿ ತರಾತುರಿಯಲ್ಲಿ ಅನುದಾನ ಘೋಷಿಸಿದೆ. ಇದೂ ಕೂಡ ಈ ಹಿಂದೆ ಘೋಷಿಸಿದ 600 ಸುಳ್ಳು ಭರವಸೆಯ ಸರಣಿಯ ಮುಂದುವರಿದ ಭಾಗ ಎಂದಿದ್ದಾರೆ.
Advertisement