ಹಲವು ಜಿಲ್ಲೆಗಳಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ: ಮಾಧುಸ್ವಾಮಿ

ಹಲವು ಜಿಲ್ಲೆಗಳ ಕೋರ್ಟ್ ಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಚಿವ ಜೆ. ಸಿ. ಮಾಧುಸ್ವಾಮಿ
ಸಚಿವ ಜೆ. ಸಿ. ಮಾಧುಸ್ವಾಮಿ
Updated on

ಬೆಂಗಳೂರು: ಹಲವು ಜಿಲ್ಲೆಗಳ ಕೋರ್ಟ್ ಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಚಿಕ್ಕೋಡಿಯಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ 32 ಕೋಟಿ ರೂ, ಮೂಡಿಗೆರೆಯಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ರೂ. 11 ಕೋಟಿ, ಕೋಲಾರದಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ರೂ. 25 ಕೋಟಿ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು. 

ಶ್ರೀನಿವಾಸಪುರದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 15 ಕೋಟಿ, ರಾಯಚೂರು ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 27 ಕೋಟಿ ಹಾಗೂ ದಾವಣಗೆರೆ ಜಿಲ್ಲೆ ಕುಂದವಾಡದಲ್ಲಿನ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ 22 ಕೋಟಿ ರೂಪಾಯಿ, ಬಳ್ಳಾರಿಯ ಪಾರ್ವತಿ ನಗರದಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ 121 ರೋಟಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರದ ಎಲ್ಲಾ ವಾರ್ಡ್ ಗಳಲ್ಲಿ 103 ಕೋಟಿ ರೂ. ವೆಚ್ಚದಲ್ಲಿ ನಮ್ಮ ಕ್ಲಿನಿಕ್ ಆರಂಭಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. 438 ಹುದ್ದೆಗಳನ್ನು ಸೃಷ್ಟಿಸಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹತೋಟಿಗೆ ತರಲು ಸಾಧ್ಯ, ಸರ್ಕಾರಿ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಬೆಳಗಾವಿ ಜಿಲ್ಲೆಯ ಅಥಣಿ- ನಿಪ್ಪಾಣಿ ರಸ್ತೆಯನ್ನು 32 ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣ ಮಾಡಲಾಗುವುದು, ಹಟ್ಟಿ ಚಿನ್ನದ ಗಣಿಯ ಒಂದು ಭಾಗದಲ್ಲಿ ರಂಧ್ರ ಕಾಣಿಸಿಕೊಂಡಿದ್ದು, ಅಲ್ಲಿಗೆ ತಲುಪುವ ವ್ಯವಸ್ಥೆಗಾಗಿ 300 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಒಬಿಸಿ ಮೀಸಲಾತಿಗಾಗಿ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿರುವ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 2000 ರೂ. ಸಂಕಷ್ಟ ಭತ್ಯೆ ನೀಡಲು ತೀರ್ಮಾನಿಸಲಾಗಿದೆ. ನೇಮಕಾತಿ ನಿಯಮ ಬದಲಾವಣೆಗೆ ಒಪ್ಪಿಗೆ ಸಿಕ್ಕಿದ್ದು, ನಿವೃತ್ತ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಅನುಮತಿ ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚುವರಿಯಾಗಿ ರೂ. 65.05 ಕೋಟಿ  ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದರು.

ಜಲ ಜೀವನ್ ಮಿಷನ್ ಯೋಜನೆಯಡಿ ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮೀಣ ಜನ ವಸತಿ, 3 ನಗರ ಸ್ಥಳೀಯ ಸಂಸ್ಥೆಗಲಿಗೆ ರೂ. 2,054 ಕೋಟಿ ಮಂಜೂರು ಮಾಡಲು ಸಮ್ಮತಿ ಸಿಕ್ಕಿದೆ. ವಿಧಾನ ಮಂಡಲ ಅಧಿವೇಶನವನ್ನು ಮುಂದಿನ ತಿಂಗಳು ಕರೆಯಲು ತೀರ್ಮಾನಿಸಲಾಗಿದೆ ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com