ಭೂಕುಸಿತವಾಗಿದ್ದ ಶಿರಾಡಿ ಘಾಟ್ ನಲ್ಲಿ ವಾಹನಗಳ ಸಂಚಾರ ಪುನರ್ ಆರಂಭ

ಮಳೆ ಕ್ಷೀಣಿಸುತ್ತಿದ್ದಂತೆಯೇ ಭೂಕುಸಿತವಾಗಿದ್ದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನಲ್ಲಿ ಸಂಚಾರ ಗುರುವಾರದಿಂದ ಪುನರಾರಂಭವಾಗಿದೆ.
ಶಿರಾಡಿ ಘಾಟ್ ಮಾರ್ಗ
ಶಿರಾಡಿ ಘಾಟ್ ಮಾರ್ಗ

ಹಾಸನ: ಮಳೆ ಕ್ಷೀಣಿಸುತ್ತಿದ್ದಂತೆಯೇ ಭೂಕುಸಿತವಾಗಿದ್ದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನಲ್ಲಿ ಸಂಚಾರ ಗುರುವಾರದಿಂದ ಪುನರಾರಂಭವಾಗಿದೆ.

ಜಿಲ್ಲಾಧಿಕಾರಿ ಆರ್ ಗಿರೀಶ್ ಅವರ ನಿರ್ದೇಶನದ ಮೇರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಲಘು ವಾಹನ ಮತ್ತು ಪ್ರಯಾಣಿಕ ವಾಹನಗಳಿಗೆ ಅವಕಾಶ ನೀಡುವಂತೆ ಡಿಸಿ ಆದೇಶದಲ್ಲಿ ಪೊಲೀಸರಿಗೆ ಸೂಚಿಸಿದ್ದಾರೆ.

ಈ ಮಾರ್ಗದಲ್ಲಿ ರಸ್ತೆ  ದುರಸ್ತಿ ಸಂಪೂರ್ಣವಾಗಿ ಮುಗಿಯುವವರೆಗೂ ಟ್ಯಾಂಕರ್, ಮೀನು ಸಾಗಾಟ ವಾಹನಗಳು, ಕಂಟೈನರ್ ಗಳು, ಬೃಹತ್ ವಾಣಿಜ್ಯ ವಾಹಗಳು,ಎಲ್ಟಿ ಆಕ್ಸೆಲ್ ಟ್ರಕ್ ಗಳನ್ನು ನಿರ್ಬಂಧಿಸುವಂತೆ, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ನಿಯಂತ್ರಣ ವಾಹನಗಳು ಸೇರಿದಂತೆ ತುರ್ತು ವಾಹನಗಳನ್ನು ವಾರದ 24 ಗಂಟೆಯೂ ಸಂಚಾರಕ್ಕೆ ಅವಕಾಶ ನೀಡುವಂತೆ ಆದೇಶಿಸಿದ್ದಾರೆ.

ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಅವಶೇಷಗಳನ್ನು ತೆರವುಗೊಳಿಸಿದ ನಂತರ  ಎರಡೂ ಬದಿಗಳಲ್ಲಿ ಮರಳಿನ ಚೀಲ ಇರಿಸುವ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ಸದೃಢಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಸ್ತೆಯ ಎರಡೂ ಬದಿಯಲ್ಲಿ ಸೈನ್ ಬೋರ್ಡ್‌ಗಳನ್ನು ಅಳವಡಿಸಲು ಮತ್ತು ಅಪಘಾತಗಳನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಎನ್ ಹೆಚ್ ಎಐ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕಳೆದ ವಾರ ದೋಣಿಗಲ್‌ನಲ್ಲಿ ಭೂಕುಸಿತ ವರದಿಯಾದ ನಂತರ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com