
ಬೆಂಗಳೂರು: ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಹೊಸ ಉದ್ಯೋಗ ನೀತಿ 2022-25ಕ್ಕೆ ರಾಜ್ಯ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ಹೊಸ ನೀತಿಯಡಿ, ಕೈಗಾರಿಕೆಗಳು ಸ್ಥಳೀಯರಿಗೆ ನಿರ್ದಿಷ್ಟಪಡಿಸಿದಂತೆ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ನೀತಿಯು ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ, ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಗೆ ಸಂಪುಟದಲ್ಲಿ ಅನುಮತಿ ಸಿಕ್ಕಿದೆ. ಇದರೊಂದಿಗೆ ಕೈಗಾರಿಕಾ ಘಟಕಗಳನ್ನು ವಿಸ್ತರಿಸಿಕೊಳ್ಳಲು ಬಯಸುತ್ತಿರುವವರು ಅಥವಾ ಹೊಸ ಕೈಗಾರಿಕೆ ಸ್ಥಾಪಿಸಲು ಎದುರು ನೋಡುತ್ತಿರುವವರು ಸ್ಥಳೀಯರಿಗೆ ಉದ್ಯೋಗದ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದರು.
ಮಧ್ಯಮ, ದೊಡ್ಡ, ಮೆಗಾ, ಅಲ್ಟ್ರಾ-ಮೆಗಾ ಮತ್ತು ಸೂಪರ್-ಮೆಗಾ ಉದ್ಯಮಗಳಲ್ಲಿ ಹೆಚ್ಚುತ್ತಿರುವ ಹೂಡಿಕೆಗೆ ಹೆಚ್ಚುವರಿ ಉದ್ಯೋಗಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವಂತೆ ಮಾರ್ಗಸೂಚಿ ರೂಪಿಸಲಾಗಿದೆ. ಮಧ್ಯಮ ಪ್ರಮಾಣದ ಕೈಗಾರಿಕೆ ಎಂದು ವರ್ಗೀಕರಿಸಿದರೆ (ಕನಿಷ್ಠ 20 ಉದ್ಯೋಗಿಗಳು ಇರುವ) ವಿಸ್ತರಣೆಗಾಗಿ 10 ಕೋಟಿ ರೂ. ಹೂಡಿಕೆ ಮಾಡಲು ಬಯಸಿದರೆ ಸ್ಥಳೀಯರಿಗೆ 10 ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕಾಗುತ್ತದೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.
ಹೂಡಿಕೆದಾರರು 50 ಕೋಟಿ ರೂ. ಹೂಡಿಕೆ ಮಾಡಲು ಬಯಸಿದರೆ, 35 ರಿಂದ 50 ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಸೂಪರ್-ಮೆಗಾ ಇಂಡಸ್ಟ್ರಿ ವಿಭಾಗದಡಿ 100 ಕೋಟಿ ರೂ.ವರೆಗೆ ಹೂಡಿಕೆ ಮಾಡಲು ಬಯಸಿದರೆ, ಅವರು 50 ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ಎಲ್ಲಾ ಹೆಚ್ಚುವರಿ ಉದ್ಯೋಗಗಳು ಸ್ಥಳೀಯ ಕನ್ನಡಿಗರಿಗೆ ಇರುತ್ತದೆ. ಅವರು ರೂಪಿಸಿದ ಮಾರ್ಗಸೂಚಿಗಳಲ್ಲಿ ವಿವಿಧ ಘಟಕಗಳು ಸ್ಥಳೀಯರಿಗೆ ಹೇಗೆ ಉದ್ಯೋಗ ಒದಗಿಸಬೇಕು ಎಂಬುದನ್ನು ಸೂಚಿಸುತ್ತವೆ ಎಂದು ತಿಳಿಸಿದರು.
ರಾಜ್ಯ ಕೈಗಾರಿಕಾ ಮಂಡಳಿಯಿಂದ ಉದ್ಯೋಗ ಕೋಟಾದ ನಿರ್ವಹಣೆ: ಉದ್ಯೋಗ ಮೀಸಲಾತಿಯು ಎಲ್ಲಾ ಎ.ಬಿ, ಸಿ ಮತ್ತು ಡಿ ಉದ್ಯೋಗ ವರ್ಗಗಳಿಗೆ ಅನ್ವಯಿಸುತ್ತದೆ, ಇದರಲ್ಲಿ ಸ್ಥಳೀಯರು ಕೆಲಸ ಮಾಡಬೇಕು. ಇದನ್ನು ಮೇಲ್ವಿಚಾರಣೆ ಮಾಡಲು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಜೊತೆಗೆ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಆಗಾಗ್ಗೆ ಪರಿಶೀಲನೆ ನಡೆಸುತ್ತಾರೆ.
ಕ್ಯಾಬಿನೆಟ್ ಸಭೆಯಲ್ಲಿ ಇದನ್ನು ವ್ಯಾಪಕವಾಗಿ ಚರ್ಚಿಸಿ, ಎಲ್ಲಾ ವರ್ಗಗಳಿಗೆ ಅನುಮೋದನೆ ನೀಡಲಾಗಿದೆ. ಇಲ್ಲದಿದ್ದರೆ ಹೊರಗಿನಿಂದ ಬಂದವರು ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ ಎಂದು ಅವರು ಹೇಳಿದರು. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 2022-23 ರ ಬಜೆಟ್‌ನಲ್ಲಿ ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವ ನೀತಿಯನ್ನು ಘೋಷಿಸಲಾಗಿತ್ತು. ಜವಳಿ, ಆಟಿಕೆ ತಯಾರಿಕೆ, ಚರ್ಮದ ಉತ್ಪನ್ನಗಳು, ಆಹಾರ ಸಂಸ್ಕರಣೆ ಮತ್ತು ಆಭರಣಗಳಂತಹ ಕಾರ್ಮಿಕ ತೀವ್ರ ವಲಯಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಆದ್ಯತೆ ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದರು.
ಸ್ಥಳೀಯರಿಗೆ ಉದ್ಯೋಗಗಳು:
Advertisement