ರಾಜ್ಯದ 46 ಸರ್ಕಾರಿ ಆಸ್ಪತ್ರೆಗಳಿಗೆ ಲಕ್ಷ್ಯ ಪ್ರಮಾಣ ಪತ್ರ
ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್‌ನ (ಎನ್‌ಎಚ್‌ಎಂ) ಲಕ್ಷ್ಯ ಯೋಜನೆಯಡಿ ಆಸ್ಪತ್ರೆಗಳಲ್ಲಿ ಪ್ರಸವಾ ಪೂರ್ವ ಮತ್ತು ಪ್ರಸವಾ ನಂತರದ ಸೇವೆ ಸುಧಾರಿಸುವ ಉದ್ದೇಶದಿಂದ ಮೇಲ್ದರ್ಜೇಗೇರಿಸುತ್ತಿರುವ ರಾಜ್ಯದ ಆಯ್ದ 125 ಆಸ್ಪತ್ರೆಗಳಲ್ಲಿ ಇದುವರೆಗೂ 46 ಆಸ್ಪತ್ರೆಗಳಿಗೆ ಲಕ್ಷ್ಯ ಪ್ರಮಾಣ ಪತ್ರವನ್ನು ಸರ್ಕಾರ ನೀಡಿದೆ.
ಈ ಯೋಜನೆಯು ಮೂರು ವರ್ಷಗಳ ಕಾಲ ನಡೆಯುತ್ತದೆ. ಆದರೆ ಸಾಂಕ್ರಾಮಿಕ ರೋಗದ ಕಾರಣದಿಂದ ಹಿಂದೆ ಸರಿಯಲಾಗಿತ್ತು. ಡಿಸೆಂಬರ್ 2021 ರಿಂದ ತಪಾಸಣೆ ಪುನರಾರಂಭವಾಯಿತು. ತಿಂಗಳಿಗೆ 100 ಕ್ಕೂ ಹೆಚ್ಚು ಹೆರಿಗೆಗಳನ್ನು ನಡೆಸುವ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೇಟರ್ನಲ್ ಹೆಲ್ತ್ ವಿಭಾಗದ ರಾಜ್ಯ ಉಪ ನಿರ್ದೇಶಕ ಡಾ ರಾಜ್‌ಕುಮಾರ್ ಎನ್ ಹೇಳಿದರು.
ಆಸ್ಪತ್ರೆಗಳಲ್ಲಿ ಅಗತ್ಯ ಸಂಖ್ಯೆಯ ಔಷಧಿಗಳು, ಲೇಬರ್ ಟೇಬಲ್‌ಗಳು ಸೇರಿದಂತೆ ವಿವಿಧ ಹಂತಗಳಲ್ಲಿ ಪರಿವೀಕ್ಷಣೆ ನಡೆಸಲಾಗುತ್ತದೆ. ಪರಿಶೀಲನಾಪಟ್ಟಿಯ ಪ್ರಕಾರ ಅಗತ್ಯ ಸೇವೆಗಳನ್ನು ಒದಗಿಸುವುದನ್ನು ಆಸ್ಪತ್ರೆಗಳು ಮುಂದುವರಿಸುತ್ತಿವೆಯೇ ಎಂದು ಪರಿಶೀಲಿಸಲು ಒಂದು ವರ್ಷದ ನಂತರ ಮೌಲ್ಯಮಾಪನವನ್ನು ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಇಲ್ಲಿಯವರೆಗೂ ಪರಿಶೀಲನಾ ಪಟ್ಟಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ನಿಯಮಗಳ ಅನುಸರಣೆ ಆಧಾರದ ಮೇಲೆ ಸಿದ್ಧತೆ ತೋರಿಸಿರುವುದಕ್ಕಾಗಿ 46 ಆಸ್ಪತ್ರೆಗಳಿಗೆ ಪ್ರಮಾಣ ಪತ್ರ ನೀಡಲಾಗಿದೆ. ಒಂದೆರಡು ತಿಂಗಳಲ್ಲಿ ಮತ್ತೆ ಕೆಲವು ಆಸ್ಪತ್ರೆಗಳಿಗೆ ಪ್ರಮಾಣ ಪತ್ರ ನೀಡಲಾಗುವುದು, ಮಾರ್ಚ್ 2023 ರೊಳಗೆ 125 ಆಸ್ಪತ್ರೆಗಳಿಗೂ ಪ್ರಮಾಣ ಪತ್ರ ದೊರೆಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಕೆ.ಸಿ.ಜನರಲ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಶಶಿಕಲಾ ಮಾತನಾಡಿ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಠಡಿಗಳ ಗುಣಮಟ್ಟ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗಿದೆ, ತಾಯಿ ಮತ್ತು ನವಜಾತ ಶಿಶುಗಳ ಮರಣ, ಅನಾರೋಗ್ಯ ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಕೆಸಿ ಜನರಲ್ ಆಸ್ಪತ್ರೆಯು ಇತ್ತೀಚೆಗೆ ಪರಿಶೀಲನೆಗೆ ಒಳಗಾಯಿತು ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ