ಈ ಸರ್ಕಾರದ ಮೇಲೆ ಜನರಿಗೆ ನಂಬಿಕೆ, ವಿಶ್ವಾಸ ಹೊರಟುಹೋಗಿದೆ, ಪ್ರವೀಣ್ ಮನೆಗೆ ಹೋದ ಸಿಎಂ ಮಸೂದ್ ಮನೆಗೆ ಭೇಟಿ ಕೊಡಲಿಲ್ಲವೇಕೆ: ಯು ಟಿ ಖಾದರ್

ಕಳೆದ 10 ದಿನಗಳಲ್ಲಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮೂರನೇ ಕಗ್ಗೊಲೆ ನಡೆದಿದೆ. ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹಿಂದೂ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಬೆಳ್ಳಾರೆಗೆ ಬಂದು ಹೋಗುವುದರೊಳಗೆ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಮತ್ತೊಂದು ಭೀಕರ ಕೊಲೆ, ರಕ್ತದೋಕುಳಿ ಹರಿದಿದೆ.
ಯು ಟಿ ಖಾದರ್
ಯು ಟಿ ಖಾದರ್

ಮಂಗಳೂರು: ಕಳೆದ 10 ದಿನಗಳಲ್ಲಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮೂರನೇ ಕಗ್ಗೊಲೆ ನಡೆದಿದೆ. ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹಿಂದೂ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಬೆಳ್ಳಾರೆಗೆ ಬಂದು ಹೋಗುವುದರೊಳಗೆ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಮತ್ತೊಂದು ಭೀಕರ ಕೊಲೆ, ರಕ್ತದೋಕುಳಿ ಹರಿದಿದೆ.

ಮಂಗಳೂರು ಹೊರವಲಯದ ಸುರತ್ಕಲ್​​ನಲ್ಲಿ 23 ವರ್ಷಯ ಮುಸ್ಲಿಂ ಯುವಕ ಫಾಜಿಲ್​ ಮಂಗಲಪೇಟೆ (Fazil Murder)ಎಂಬಾತನ ಹತ್ಯೆ ಕಳೆದ ರಾತ್ರಿ ನಡೆದಿದ್ದು ಸುರತ್ಕಲ್​, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್​ ಹಾಕಲಾಗಿದ್ದು, ಸುರತ್ಕಲ್​ನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಾವಳಿಯ ಕಾಂಗ್ರೆಸ್ ನಾಯಕ ಶಾಸಕ ಯು ಟಿ ಖಾದರ್, ಕಳೆದ 10 ದಿನಗಳಲ್ಲಿ ಆದ ಮೂರೂ ಕೊಲೆಯನ್ನು ನಾವು ಖಂಡಿಸುತ್ತೇವೆ. ಇದಕ್ಕೆ ನೈಜ ಕಾರಣವನ್ನು ಮತ್ತು ಕಾರಣರಾದವರನ್ನು ಸರ್ಕಾರ ಪತ್ತೆಹಚ್ಚಿ ಜನರ ಮುಂದೆ ನಿಲ್ಲಿಸಿ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಬಹುದು ಎಂದು ಹೇಳಿದ್ದಾರೆ.

ನೈಜವಾದ ಆರೋಪಿಗಳನ್ನು ಬಂಧಿಸದೆ ಒತ್ತಡಕ್ಕೆ ಪೊಲೀಸರು ಅಮಾಯಕರನ್ನು ಕರೆದುಕೊಂಡು ಬಂದರೆ ಸರ್ಕಾರದ, ಪೊಲೀಸ್ ಇಲಾಖೆಯ ವೈಫಲ್ಯವಾಗುತ್ತದೆ. ರಾಜ್ಯಸರ್ಕಾರ ಪಕ್ಷಾತೀತ, ನ್ಯಾಯತೀತವಾಗಿ ನಡೆದುಕೊಂಡು ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಮಾಡುವ ಕೆಲಸವಾಗಬೇಕಿದೆ ಎಂದರು. ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಗಳನ್ನು ಯಾವ ನಾಯಕರೂ ನೀಡಬಾರದು ಎಂದರು.

ಮಂಗಳೂರಿನಲ್ಲಿ ಶಾಂತಿ ನಲೆಸುವ ಕೆಲಸ ಮಾಡಬೇಕಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬಂದಾಗಲೇ ಕೊಲೆಯಾಗಿದೆ. ಸರ್ಕಾರದ ಮೇಲೆ ನಮಗೆ ನ್ಯಾಯ ಸಿಗುವ ನಂಬಿಕೆ ಇಲ್ಲದಾಗಿದೆ, ಇಲ್ಲಿ ಏನಾಗುತ್ತಿದೆ, ಶಾಂತಿ ಕದಡುವ ಕೆಲಸ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಮೊನ್ನೆ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿದ್ದು ಸ್ವಾಗತಾರ್ಹ. ಅದೇ ರೀತಿ ಸುಳ್ಯದಲ್ಲಿ ಕೆಲ ದಿನಗಳ ಹಿಂದೆ ಹತ್ಯೆಯಾದ ಮಸೂದ್ ಕುಟುಂಬದವರನ್ನೂ ಭೇಟಿ ಮಾಡಿ ನೋವಿನಲ್ಲಿರುವ ಆ ಕುಟುಂಬಕ್ಕೂ ಧೈರ್ಯ ಹೇಳುವ ಕೆಲಸ ಮಾಡಬೇಕಾಗಿತ್ತು, ಸಿಎಂ, ಗೃಹ ಸಚಿವರು ಎಲ್ಲರಿಗೂ ನ್ಯಾಯ ಒದಗಿಸುವ ತಾರತಮ್ಯವಾಗದಂತೆ ನಡೆದುಕೊಳ್ಳಬೇಕು ಅಲ್ಲವೇ ಎಂದು ಯು ಟಿ ಖಾದರ್ ಪ್ರಶ್ನಿಸಿದ್ದಾರೆ. 

ಮಸೂದ್ ಬರ್ಬರ ಕೊಲೆ ಹಿನ್ನೆಲೆ ಎಸ್‌ಡಿಎಫ್‌ಐ ಜಿಲ್ಲಾಧ್ಯಕ್ಷ ಅಬೂಬಕರ್ ಹೇಳಿಕೆ ನೀಡಿದ್ದು, ನಿನ್ನೆ ಆರ್‌ಎಸ್‌ಎಸ್‌ ಹಿನ್ನೆಲೆ ಇರುವ ವ್ಯಕ್ತಿಗಳಿಂದ ಹತ್ಯೆಯಾಗಿದೆ. ಅಮಾಯಕ ವ್ಯಕ್ತಿಯನ್ನು ಸುರತ್ಕಲ್‌ನಲ್ಲಿ ಕೊಲೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಶವದ ಮೇಲೆ ಆಡಳಿತವನ್ನ ಮಾಡುತ್ತಿದ್ದಾರೆ. ಕೊಲೆಯಿಂದ ರಾಜಕೀಯ ಶಕ್ತಿಗಳ ಕೈವಾಡ ಇದೆ. ಮಂಗಳೂರಿನಲ್ಲಿ ಇದುವರೆಗೆ 3 ಜನರ ಕೊಲೆಯಾಗಿದೆ. ಮಸೂದ್ ಕೊಲೆಯಾದ ಸಂದರ್ಭದಲ್ಲಿ ಯಾರು ಧ್ವನಿ ಎತ್ತಲಿಲ್ಲ. ಪ್ರವೀಣ್ ಹತ್ಯೆಯನ್ನ ನಾನು ಖಂಡನೆ ಮಾಡುತ್ತೇನೆ. ನಿನ್ನೆ ಸಿಎಂ ಬೊಮ್ಮಾಯಿ ಬಂದು ಕೇವಲ ಪ್ರವೀಣ್ ಮನೆಗೆ ಭೇಟಿ ನೀಡಿದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಫಾಸಿಲ್ ಮೃತದೇಹವನ್ನು ಇಂದು ಬೆಳಗ್ಗೆ ಸುರತ್ಕಲ್ ನಿಂದ ಮಂಗಲಪೇಟೆಗೆ ರವಾನಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com