ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟ

ಅಂಜನಾದ್ರಿ ಬೆಟ್ಟಗಳ ಅಭಿವೃದ್ಧಿಗೆ ಶೀಘ್ರದಲ್ಲೇ ಸರ್ಕಾರ ಒಪ್ಪಿಗೆ ಸಾಧ್ಯತೆ

ಜೂನ್ 15 ರಂದು ನಗರದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉನ್ನತ ಮಟ್ಟದ ಸಭೆ ನಡೆಸಲಿದ್ದು, ಈ ವೇಳೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಗಳ ಅಭಿವೃದ್ಧಿಗೆ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Published on

ಕೊಪ್ಪಳ: ಜೂನ್ 15 ರಂದು ನಗರದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉನ್ನತ ಮಟ್ಟದ ಸಭೆ ನಡೆಸಲಿದ್ದು, ಈ ವೇಳೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಗಳ ಅಭಿವೃದ್ಧಿಗೆ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ತಿರುಮಲ, ನಾಸಿಕ್ ಹನುಮ ಜನ್ಮಸ್ಥಳವೆಂದು ಹೇಳುತ್ತಿದೆ. ಆದರೆ, ವಾಸ್ತವವಾಗಿ ಅಂಜನಾದ್ರಿ ಬೆಟ್ಟಗಳ ಮೇಲಿರುವ ಹನುಮಾನ್ ದೇವಾಲಯವನ್ನು ಭಗವಾನ್ ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ.

ಅಂಜನಾದ್ರಿ ಬೆಟ್ಟಗಳಿರುವ ಗಂಗಾವತಿ ತಾಲೂಕು ಆನೆಗುಂದಿ ಗ್ರಾಮವಾಗಿ ಮಹತ್ವವನ್ನು ಪಡೆದುಕೊಂಡಿದೆ, ಇದನ್ನು ವಿಜಯನಗರ ಸಾಮ್ರಾಜ್ಯದ ಮೂಲವೆಂದು ಪರಿಗಣಿಸಲಾಗಿದೆ. ರಾಮಾಯಣ ರೈಲು ಸೇವಾ ಸರ್ಕ್ಯೂಟ್ ಅಡಿಯಲ್ಲಿ ಈ ಸ್ಥಳವನ್ನು ಅಯೋಧ್ಯೆಯೊಂದಿಗೆ ಸಂಪರ್ಕಿಸಲು ಕೇಂದ್ರ ಸರ್ಕಾರ ಈಗಾಗಲೇ ಚಿಂತನೆ ನಡೆಸಿದೆ.

ಕೊಪ್ಪಳ ಜಿಲ್ಲಾಡಳಿತವು ಸ್ಥಳದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಆದರೆ, ಗುಡ್ಡಗಳಿಂದಾಗಿ ಇವುಗಳ ಕಾರ್ಯ ವಿಳಂಬವಾಗಿದೆ. ಜಿಲ್ಲಾಡಳಿತದ ನೀಲನಕ್ಷೆಯಲ್ಲಿ ರಸ್ತೆ ವಿಸ್ತರಣೆ, ವಾಹನ ನಿಲುಗಡೆ ಸ್ಥಳ, ವ್ಯಾಖ್ಯಾನ ಕೇಂದ್ರ, 'ಯಾರಿ ನಿವಾಸ', ಸಾರ್ವಜನಿಕ ಶೌಚಾಲಯಗಳು, ಮಾರುಕಟ್ಟೆ ಕೇಂದ್ರ ಮತ್ತು ರೋಪ್‌ವೇ ಗಳಿವೆ. ಈಗಾಗಲೇ 2022-23ರ ರಾಜ್ಯ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಅಂಜನಾದ್ರಿ ಬೆಟ್ಟಗಳ ಅಭಿವೃದ್ಧಿಗೆ ರೂ.120 ಕೋಟಿ ಮೀಸಲಿಟ್ಟಿರುವುದಾಗಿ ಘೋಷಿಸಿತ್ತು.

ನಿನ್ನೆಯಷ್ಟೇ ಸಚಿವ ಆನಂದ್ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಜೂನ್. 15 ರಂದು ಬೊಮ್ಮಾಯಿಯವರು ನಡೆಸಲಿರುವ ಉನ್ನತ ಮಟ್ಟದ ಸಭೆಯಲ್ಲಿ ಆನಂದ್ ಸಿಂಗ್ ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.

ಭೇಟಿ ಬಳಿಕ ಮಾತನಾಡಿದ ಆನಂದ್ ಸಿಂಗ್ ಅವರು, ಮೂಲ ಸೌಕರ್ಯ ಕಲ್ಪಿಸಲು ಗುಡ್ಡಗಳ ಸುತ್ತಲಿನ 60 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ರೈತರ ಮನವೊಲಿಸಲಾಗುವುದು. ಗಂಗಾವತಿ ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಆನೆಗುಂದಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ನೀರಾವರಿಗೆ ಒಳಪಡುವುದರಿಂದ ಈ ಭಾಗದಲ್ಲಿ ಫಲವತ್ತಾದ ಭೂಮಿ ಇದ್ದರೂ ರೈತರಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಹಣ ನೀಡಲಾಗುವುದು ಎಂದು ಹೇಳಿದರು.

ಅಲ್ಲದೆ, ಅಂಜನಾದ್ರಿ ಬೆಟ್ಟವನ್ನು ಹನುಮಂತನ ಮೂಲ ಜನ್ಮಸ್ಥಳ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರವು ಮಾತುಕತೆ ಮುಂದುವರೆಸಿದೆ ಎಂದು ಸಚಿವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com