ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ
ಹನುಮನ ಜನ್ಮಸ್ಥಳ ಹಂಪಿ ಬಳಿ ಇರುವ ಅಂಜನಾದ್ರಿ ಶ್ರೀ ಕ್ಷೇತ್ರವನ್ನು ಸರ್ಕಾರ ಅಭಿವೃದ್ಧಿ ಪಡಿಸಲು ತೀರ್ಮಾನಿಸಿದ್ದು, ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳ ಅನುದಾನವನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Published: 03rd April 2022 09:20 AM | Last Updated: 03rd April 2022 09:20 AM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಹನುಮನ ಜನ್ಮಸ್ಥಳ ಹಂಪಿ ಬಳಿ ಇರುವ ಅಂಜನಾದ್ರಿ ಶ್ರೀ ಕ್ಷೇತ್ರವನ್ನು ಸರ್ಕಾರ ಅಭಿವೃದ್ಧಿ ಪಡಿಸಲು ತೀರ್ಮಾನಿಸಿದ್ದು, ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳ ಅನುದಾನವನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶ್ರೀ ರಾಮಸೇವಾ ಮಂಡಳಿ ಆಯೋಜಿಸಿರುವ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೇ ವರ್ಷ ಯೋಜನೆ ಸಿದ್ದಪಡಿಸಿ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಕೆಲಸ ಈ ವರ್ಷವೇ ಪ್ರಾರಂಭವಾಗಲಿದೆ. ವಿಶಿಷ್ಟವಾದ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಮುಖರ ಸಲಹೆ ಮೇರೆಗೆ ತೆಗೆದುಕೊಳ್ಳಲು ತೀರ್ಮಾನಿಸಿದೆ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ತಿಳಿದಿರುವ ತಜ್ಞರ ಹೆಸರುಗಳನ್ನು ಒದಗಿಸಲು ಮನವಿ ಮಾಡಲಾಗಿದೆ. ಶ್ರೀ ರಾಮ ಸೇವಾ ಮಂಡಳಿಯವರು ಸ್ಥಾಪಿಸಲು ಉದ್ದೇಶಿಸಿರುವ ಕಲಾ ಸಾಕೇತ್ ಸ್ಥಾಪನೆಗೆ ಸರ್ಕಾರ ನೆರವು ಒದಗಿಸುವುದು ಎಂದು ಭರವಸೆ ನೀಡಿದರು.
ಇಂದು ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಶ್ರೀ ರಾಮ ಸೇವಾ ಮಂಡಳಿ, ರಾಮನವಮಿ ಉತ್ಸವ ಸಮಿತಿ ಅವರು ಏರ್ಪಡಿಸಿದ್ದ 84ನೇ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದೆನು.
ಈ ಸಂದರ್ಭದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಸಾಹಿತಿ ಡಾ. ಸುಧಾಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು. pic.twitter.com/S8RDBq3l5G— Basavaraj S Bommai (@BSBommai) April 2, 2022
ಸಂಗೀತ ಅವಿಭಾಜ್ಯ ಅಂಗ:
ಪ್ರತಿಶಬ್ಧಕ್ಕೂ ತನ್ನದೇ ರಾಗತಾಳವಿರುತ್ತದೆ. ಸಂಗೀತ ಮನುಷ್ಯನ ಉತ್ಸಾಹ, ಆನಂದ, ಸಮಾಧಾನ, ಭಾವನೆಗಳನ್ನು ಅಭಿವ್ಯಕ್ತಿ ಪಡಿಸುವ ಮಾಧ್ಯಮವೂ ಹೌದು. ದಣಿದಾಗ ಸಂಗೀತ ಕೇಳಿದರೆ ಆಹ್ಲಾದ ಉಂಟಾಗುತ್ತದೆ ಎಂದರು. ಕಳೆದ 8 ದಶಕಗಳಿಂದ ಶ್ರೀ ರಾಮನವಮಿ ಸಂದರ್ಭದಲ್ಲಿ ಸಂಗೀತೋತ್ಸವ ಆಯೋಜಿಸುತ್ತಿರುವ ಶ್ರೀರಾಮ ಸೇವಾ ಮಂಡಳಿಯ ಎಲ್ಲರೂ ಅಭಿನಂದನಾರ್ಹರು. ಸಂಗೀತದಿಂದ ಉತ್ತಮವಾಗಿ ಭಕ್ತಿಯ ಅಭಿವ್ಯಕ್ತಿಯಾಗುತ್ತದೆ. ಕೆಲವು ಭಕ್ತಿ ಗೀತೆಗಳು ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ. ನಾನು ಶ್ರೀರಾಮ ಹಾಗೂ ಹನುಮನ ಭಕ್ತ. ಅದರೊಂದಿಗೆ ಸಂಗೀತದ ಭಕ್ತನೂ ಹೌದು ಎಂದರು.
ಶ್ರೀಮಂತ ಸಂಸ್ಕೃತಿ: ಕನ್ನಡ ನಾಡಿನ ಸಂಸ್ಕೃತಿ ಶ್ರೀಮಂತವಾದದ್ದು. ಭಕ್ತಿಗೀತೆಯಿಂದ ಪ್ರಾರಂಭವಾಗಿ ಜಾನಪದದವರೆಗೂ ವಿವಿಧ ಪ್ರಕಾರಗಳು ಕರ್ನಾಟಕದಲ್ಲಿದೆ. ಬೇರೆಲ್ಲೂ ಇರದ ಸಂಗೀತ ಶ್ರೀಮಂತಿಕೆ ಕನ್ನಡ ನಾಡಿನಲ್ಲಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯವನ್ನೊಳಗೊಂಡ ಕರ್ನಾಟಕದ ಸಂಗೀತ ಉತ್ತಮವಾಗಿದೆ. ವಚನ, ದಾಸರ ಪದಗಳು ಸಂಗೀತದ ಮೂಲಕ ಮನಸ್ಸಿಗೆ ನೇರವಾಗಿ ಮುಟ್ಟುತ್ತದೆ. ಕರ್ನಾಟಕ ಸಂಗೀತ ಭಕ್ತಿ ಪ್ರಧಾನವಾಗಿದೆ. ಭಕ್ತಿ ಎಂದರೆ ಉತ್ಕೃಷ್ಟವಾದ, ಪ್ರತಿಫಲಾಪೇಕ್ಷೆ ಇಲ್ಲದ ಪ್ರೀತಿ. ಇದು ಇದ್ದಲ್ಲಿ ಸಂಗೀತ ಇದ್ದೇ ಇರುತ್ತದೆ. ಶುದ್ಧವಾದುವೆಲ್ಲವೂ ಸಂಗೀತಮಯ ಎಂದರು.
ಸಂಗೀತೋತ್ಸವದ ತೂಕ ದೊಡ್ಡದು:
ಶ್ರೀರಾಮ ಸೇವಾ ಮಂಡಳಿ ಇವೆಲ್ಲಕ್ಕೂ ವೇದಿಕೆ ಕಲ್ಪಿಸಿದೆ. ದೊಡ್ಡ ಸಂಗೀತಗಾರರು ಇಲ್ಲಿ ಪ್ರದರ್ಶನ ನೀಡಿದ್ದಾರೆ. ಕಾರ್ಯಕ್ರಮದ ತೂಕ ಬಹಳ ದೊಡ್ಡದು. ನಮ್ಮ ಸರ್ಕಾರ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಕನ್ನಡ ಭಾಷೆ, ನೆಲ, ಜಲ, ಜನ ಇವುಗಳ ಹಿತಾಸಕ್ತಿ ಕಾಪಾಡಲು ಕಲೆ ಸಂಸ್ಕೃತಿ,ಸಂಗೀತ, ಸಾಹಿತ್ಯಕ್ಕೆ ಬೆಲೆ ನೀಡಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನೆಲ್ಲ ಮಾಡಲು ಸಾಧ್ಯವಿದೆಯೋ ಅವುಗಳನ್ನು ಮಾಡುವುದು ಎಂದರು. ಸಂಸ್ಕೃತಿ ಇಲ್ಲದೆ ನಾಡು ಕಟ್ಟಲು ಸಾಧ್ಯವಿಲ್ಲ. ಸಂಸ್ಕೃತಿ ನಮ್ಮನ್ನು ಭಾವನೆಗಳಿಂದ ಒಂದುಗೂಡಿಸುತ್ತದೆ ಎಂದರು.
ನಾವಿರುವ ನಾಡಿನ ಅಸ್ಮಿತೆ ಸಂಸ್ಕೃತಿಯಿಂದ ಬರುತ್ತದೆ. ವೈಶಿಷ್ಟ್ಯತೆ ಕಾಣುವುದು ನಮ್ಮ ಸಂಸ್ಕೃತಿಯಿಂದ ಹೀಗಾಗಿ ಅದನ್ನು ನಾವು ಉಳಿಸಿಕೊಂಡು ಬದಲಾವಣೆಯ ಕಾಲದಲ್ಲಿ ಅದನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ನಾಡು, ಭಾಷೆ, ಜನರ ವೈಶಿಷ್ಟ್ಯತೆ ಕಾಪಾಡಿಕೊಳ್ಳಬಹುದು. ಭಾರತದ ಸಂಸ್ಕೃತಿ, ಸನಾತನ ಧರ್ಮದ ತತ್ವಗಳು ವಿಭಿನ್ನವಾಗಿದೆ ಎಂದರು.