

ಬೆಂಗಳೂರು: ಬೆಂಗಳೂರಿನಿಂದ ಸುಮಾರು 190 ಕಿ.ಮೀ. ದೂರದಲ್ಲಿರುವ ಹಾಸನಕ್ಕೆ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ 1966ರಲ್ಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಾದರೂ, ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ದಶಕಗಳ ಕನಸು ಇನ್ನೂ ನನಸಾಗುವ ಹಂತಕ್ಕೆ ತಲುಪಿಲ್ಲ.
ಹಾಸನ ಸಮೀಪ ಭುವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಸಂಪನ್ಮೂಲ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾಗಿದ್ದು, ಇದರಿಂದ ಯೋಜನೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
516 ಏಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಗೆ 2006ರಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎವಿಯೇಷನ್ ತರಬೇತಿ ಕೇಂದ್ರ, ಎಂಆರ್‌ಒ ಸೌಲಭ್ಯ, ಕಾರ್ಗೋ ಟರ್ಮಿನಲ್, ಕೋಲ್ಡ್ ಸ್ಟೋರೇಜ್ ಸೇರಿದಂತೆ ಬಹುಮುಖ ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ರಾಜ್ಯ ಸರ್ಕಾರ ಅದನ್ನು ಸರಳ (ನೋ-ಫ್ರಿಲ್) ವಿಮಾನ ನಿಲ್ದಾಣವಾಗಿ ನಿರ್ಮಿಸಲು ನಿರ್ಧರಿಸಿತು.
ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಉಡಾನ್ ಯೋಜನೆಯಡಿ ಕಾಮಗಾರಿ ಕಾರ್ಯವನ್ನು ಮುಂದುವರಿಸಲಾಯಿತು.
ಯೋಜನೆ ಭೂ ಪ್ರದೇಶದಲ್ಲಿ ಟರ್ಮಿನಲ್ ಕಟ್ಟಡ, ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೋಪುರ, ರನ್‌ವೇ ಹಾಗೂ ಏಪ್ರಾನ್ ಸೇರಿದಂತೆ ಶೇಕಡಾ 80ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದೆ. ಆದರೆ, ವಿಮಾನ ನಿಲ್ದಾಣದ ಮೇಲ್ಮೈಯಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗಿರುವುದು ಹಾಗೂ ಟವರ್ ಸ್ಥಳಾಂತರಕ್ಕೆ ರೈತರಿಂದ ಹೆಚ್ಚಿನ ಪರಿಹಾರ ಬೇಡಿಕೆ ಬಂದಿದ್ದರಿಂದ ಕಾಮಗಾರಿ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ, ಯೋಜನೆಗೆ ಸಕಾಲದಲ್ಲಿ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ವಿಫಲವಾಗಿರುವುದು ಮತ್ತೊಂದು ಕಳವಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಸಂಪರ್ಕ ರಸ್ತೆಗಳ ನಿರ್ಮಾಣಕ್ಕಾಗಿ ಹೊಸ ಭೂಸ್ವಾಧೀನಕ್ಕೆ ರೂ.143.67 ಕೋಟಿ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಮನವಿ ಮಾಡಿದ್ದು, ವಿಮಾನ ನಿಲ್ದಾಣ ಪೂರ್ಣಗೊಳಿಸಲು ಇನ್ನೂ ಸುಮಾರು ರೂ.200 ಕೋಟಿ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ವಿಮಾನ ನಿಲ್ದಾಣ ಪೂರ್ಣಗೊಂಡರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಭುವನಹಳ್ಳಿಯ ಇಬ್ಬರು ರೈತರಾದ ಕೃಷ್ಣೇಗೌಡ ಮತ್ತು ಬೊಮ್ಮೇಗೌಡ ಅವರು ಮಾತನಾಡಿ, ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಹಾಗೂ ಯೋಜನೆಗಾಗಿ ಭೂಮಿ ಹಸ್ತಾಂತರಿಸಿದ ಸ್ಥಳೀಯರಿಗೆ ಅಧಿಕಾರಿಗಳು ಉದ್ಯೋಗಾವಕಾಶ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
Advertisement