ಪಾರದರ್ಶಕ ನೇಮಕಾತಿಗಾಗಿ ರಾಷ್ಟ್ರೀಯ ಮಾನದಂಡ ಸ್ಥಾಪಿಸಿ: ಸಿಎಂ ಸಿದ್ದರಾಮಯ್ಯಗೆ ನಿಖಿಲ್ ಕುಮಾರಸ್ವಾಮಿ ಮನವಿ

ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ, ರಾಜಕೀಯವನ್ನು ಬದಿಗಿಟ್ಟು ಒಬ್ಬ ಕನ್ನಡಿಗನಾಗಿ ಬರೆಯುತ್ತಿದ್ದೇನೆ. ಕರ್ನಾಟಕದ ಉದ್ಯೋಗ ನೇಮಕಾತಿ ಬಿಕ್ಕಟ್ಟು ಕೇವಲ ಒಂದು ಸರ್ಕಾರದ ಅಥವಾ ಒಂದು ಅವಧಿಯ ಸಮಸ್ಯೆಯಲ್ಲ.
Nikhil kumaraswamy
ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ಯುವಜನತೆ ಕೇಳುತ್ತಿರುವುದು ಅನುಕಂಪವಲ್ಲ. ಅವರು ನ್ಯಾಯ ಮತ್ತು ಘನತೆಯನ್ನು ಕೇಳುತ್ತಿದ್ದಾರೆ. ಇದನ್ನು ಶಾಶ್ವತವಾಗಿ ಸರಿಪಡಿಸಬೇಕು. ಹೀಗಾಗಿ ಕೆಪಿಎಸ್‌ಸಿಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ, ರಾಜಕೀಯವನ್ನು ಬದಿಗಿಟ್ಟು ಒಬ್ಬ ಕನ್ನಡಿಗನಾಗಿ ಬರೆಯುತ್ತಿದ್ದೇನೆ. ಕರ್ನಾಟಕದ ಉದ್ಯೋಗ ನೇಮಕಾತಿ ಬಿಕ್ಕಟ್ಟು ಕೇವಲ ಒಂದು ಸರ್ಕಾರದ ಅಥವಾ ಒಂದು ಅವಧಿಯ ಸಮಸ್ಯೆಯಲ್ಲ. ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ, ಹಗರಣಗಳು, ಪರೀಕ್ಷೆಗಳ ರದ್ದತಿ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಖಾಲಿ ಹುದ್ದೆಗಳು ನಮ್ಮ ಯುವಜನತೆಯ ಆತ್ಮವಿಶ್ವಾಸವನ್ನು ಬುಡಮೇಲು ಮಾಡಿವೆ.

ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್‌ನಿಂದ ಹಿಡಿದು ಪೊಲೀಸ್, ಪಿಎಸ್‌ಐ, ಎಫ್‌ಡಿಎ/ಎಸ್‌ಡಿಎ ಪರೀಕ್ಷೆಗಳವರೆಗಿನ ವಿಫಲತೆಗಳು ಕೇವಲ ವ್ಯಕ್ತಿಗತ ಲೋಪಗಳಲ್ಲ; ಇದು ಇಡೀ ವ್ಯವಸ್ಥೆಯ ಸೋಲು. ಇಲ್ಲಿ ಪ್ರತಿಯೊಬ್ಬ ಭಾಗಿದಾರರೂ ಜವಾಬ್ದಾರಿಯನ್ನು ಹೊರಬೇಕಿದೆ.

ಮಂಜೂರಾದ ಹುದ್ದೆಗಳಲ್ಲಿ ಇಂದು ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಾನಗಳು ಖಾಲಿ ಇವೆ. ಹತ್ತು ವರ್ಷಗಳ ಹಿಂದೆ ಶೇ. 24ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣ ಇಂದು ಶೇ. 33ಕ್ಕೆ ಏರಿಕೆಯಾಗಿದೆ ಎಂದರೆ, ಇದು ಕೇವಲ ಅಲ್ಪಾವಧಿಯ ಸಮಸ್ಯೆಯಲ್ಲ, ದಶಕಗಳಿಂದ ಬೆಳೆದು ಬಂದಿರುವ ಆಳವಾದ ರಚನಾತ್ಮಕ ಬಿಕ್ಕಟ್ಟು ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಒಬ್ಬರನ್ನೊಬ್ಬರು ದೂಷಿಸುವುದನ್ನು ನಿಲ್ಲಿಸಿ, ಈಗ ಸುಧಾರಣೆಯತ್ತ ಹೆಜ್ಜೆ ಇಡಬೇಕಾದ ಸಮಯ ಬಂದಿದೆ.

Nikhil kumaraswamy
ಪಲಾಯನವಾದಿಯಲ್ಲ, ನಾನು ರಾಮನಗರಕ್ಕೆ ಫಿಕ್ಸ್; ಎಲ್ಲಾ ಕಡೆಯಿಂದಲೂ ವಿರೋಧಿಗಳು ನನ್ನ ರೌಂಡಪ್ ಮಾಡ್ತಾರೆ: ನಿಖಿಲ್

ಕರ್ನಾಟಕವು ಕೆಪಿಎಸ್‌ಸಿಯಲ್ಲಿ ಈ ಕೆಳಗಿನ ರಚನಾತ್ಮಕ ಬದಲಾವಣೆಗಳನ್ನು ತರುವ ಮೂಲಕ ದೇಶಕ್ಕೆ ಮಾದರಿಯಾಗಲಿ:

1. ಶಾಸನಬದ್ಧ ವಾರ್ಷಿಕ ಉದ್ಯೋಗ ಕ್ಯಾಲೆಂಡರ್: ಪ್ರತಿ ವರ್ಷ ಜನವರಿಯಲ್ಲಿ ಅಧಿಸೂಚನೆ, ಪರೀಕ್ಷೆ, ಫಲಿತಾಂಶ ಮತ್ತು ನೇಮಕಾತಿಯ ನಿಖರ ದಿನಾಂಕಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆಯಾಗಲಿ.

2. ಮಿಷನ್ ಮೋಡ್ ಬ್ಯಾಕ್‌ಲಾಗ್ ತೆರವು: ಖಾಲಿ ಇರುವ ಹುದ್ದೆಗಳನ್ನು ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಭರ್ತಿ ಮಾಡಲು ಪಾರದರ್ಶಕ 'ಮಿಷನ್ ಮೋಡ್' ಯೋಜನೆ ರೂಪಿಸಲಿ.

3. ಗಣಕೀಕೃತ ಪರೀಕ್ಷೆ (CBT): ಮಾನವ ಹಸ್ತಕ್ಷೇಪ ಮತ್ತು ವಿಳಂಬವನ್ನು ತಪ್ಪಿಸಲು ಸಾಧ್ಯವಿರುವ ಕಡೆಗಳಲ್ಲಿ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲಿ.

4. ಬಯೋಮೆಟ್ರಿಕ್ ದೃಢೀಕರಣ: ಪಾರದರ್ಶಕತೆ ಕಾಪಾಡಲು ಮತ್ತು ನಕಲಿ ಅಭ್ಯರ್ಥಿಗಳನ್ನು ತಡೆಯಲು ನೇಮಕಾತಿಯ ಪ್ರತಿ ಹಂತದಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬರಲಿ.

5. ಸುರಕ್ಷಿತ ಡಿಜಿಟಲ್ ಪ್ರಶ್ನೆಪತ್ರಿಕೆ ವಿತರಣೆ: ಎನ್‌ಕ್ರಿಪ್ಟ್ ಮಾಡಿದ ಡಿಜಿಟಲ್ ಪ್ರಶ್ನೆ ಪತ್ರಿಕೆಗಳ ಬಳಕೆ ಮತ್ತು ಸಿಸಿಟಿವಿ ಕಣ್ಗಾವಲಿರುವ ಮೊಬೈಲ್ ರಹಿತ ಪರೀಕ್ಷಾ ಕೇಂದ್ರಗಳನ್ನು ಕಡ್ಡಾಯಗೊಳಿಸಲಿ.

6. ಸಾರ್ವಜನಿಕ ಡ್ಯಾಶ್‌ಬೋರ್ಡ್: ಪ್ರತಿಯೊಂದು ಇಲಾಖೆಯ ನೇಮಕಾತಿ ಪ್ರಕ್ರಿಯೆಯ ಪ್ರಗತಿಯನ್ನು ಜನಸಾಮಾನ್ಯರು ಗಮನಿಸುವಂತೆ ಡಿಜಿಟಲ್ ಡ್ಯಾಶ್‌ಬೋರ್ಡ್ ಸಿದ್ಧಪಡಿಸಲಿ.

7. ಕರ್ನಾಟಕ ನೇಮಕಾತಿ ಸಮಗ್ರತಾ ಕಾಯ್ದೆ: ಮಹಾರಾಷ್ಟ್ರದ ಮಾದರಿಯಲ್ಲಿ ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆ ವಿರುದ್ಧ ಕಠಿಣವಾದ, ಜಾಮೀನು ರಹಿತ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲಿ.

ಇಂದು ತೆಲಂಗಾಣ ತಂತ್ರಜ್ಞಾನದ ಮೂಲಕ ಆಧುನೀಕರಣಗೊಂಡಿದೆ, ಉತ್ತರ ಪ್ರದೇಶ ವಾರ್ಷಿಕ ಕ್ಯಾಲೆಂಡರ್‌ಗೆ ಬದ್ಧವಾಗಿದೆ ಮತ್ತು ಮಹಾರಾಷ್ಟ್ರ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ.

ಭಾರತದ ತಂತ್ರಜ್ಞಾನದ ರಾಜಧಾನಿಯಾಗಿರುವ ಕರ್ನಾಟಕವು ಪಾರದರ್ಶಕ ನೇಮಕಾತಿಯಲ್ಲಿ ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಬೇಕಿದೆ.

Nikhil kumaraswamy
BJP ಜತೆ ಕೈಜೋಡಿಸಿದರೂ JDS ಮೂಲ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ: ನಿಖಿಲ್ ಕುಮಾರಸ್ವಾಮಿ

ಒಬ್ಬ ಯುವ ನಾಯಕನಾಗಿ ನಾನು ರಾಜಕೀಯವನ್ನು ಮೀರಿ ಯೋಚಿಸುತ್ತಿದ್ದೇನೆ, ಏಕೆಂದರೆ ಇದು ನಮ್ಮ ಯುವಜನತೆಯ ಉಜ್ವಲ ಭವಿಷ್ಯದ ಪ್ರಶ್ನೆ. ವ್ಯವಸ್ಥೆಯ ಮೇಲೆ ನಂಬಿಕೆ ಮೂಡಿಸುವಂತಹ ಯಾವುದೇ ಸುಧಾರಣೆಗೆ ನಾನು ಸಂಪೂರ್ಣ ಬೆಂಬಲ ನೀಡಲು ಸಿದ್ಧನಿದ್ದೇನೆ.

ನಮ್ಮ ಯುವಜನತೆ ಕೇಳುತ್ತಿರುವುದು ಅನುಕಂಪವಲ್ಲ; ಅವರು ನಿಶ್ಚಿತತೆ, ನ್ಯಾಯ ಮತ್ತು ಘನತೆಯನ್ನು ಕೇಳುತ್ತಿದ್ದಾರೆ. ಇದನ್ನು ನಾವು ಶಾಶ್ವತವಾಗಿ ಸರಿಪಡಿಸೋಣ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com