BJP ಜತೆ ಕೈಜೋಡಿಸಿದರೂ JDS ಮೂಲ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ: ನಿಖಿಲ್ ಕುಮಾರಸ್ವಾಮಿ

ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದ ನಿರ್ಧಾರ ರಾಷ್ಟ್ರೀಯ ವರಿಷ್ಠರ ಮಟ್ಟದಲ್ಲಿ ನಿರ್ಧಾರವಾಗಿದೆ ಸ್ಥಳೀಯ ಮಟ್ಟದಲ್ಲಿ ಇದನ್ನು ಚರ್ಚಿಸುವ ಅಗತ್ಯವಿಲ್ಲ.
Nikil Kumaraswamy
ನಿಖಿಲ್ ಕುಮಾರಸ್ವಾಮಿ
Updated on

ವಿಜಯಪುರ: ಬಿಜೆಪಿ ಜೊತೆ ರಾಜಕೀಯ ಮೈತ್ರಿ ಮಾಡಿಕೊಂಡಿದ್ದರೂ ಜನತಾದಳ (ಜೆಡಿಎಸ್) ಪಕ್ಷದ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತನ್ನ ಮೂಲ ಸಿದ್ಧಾಂತ, ತತ್ವಗಳಿಗೆ ಬದ್ಧವಾಗಿದೆ. ಬಿಜೆಪಿಯೊಂದಿಗೆ ಕೈಜೋಡಿಸಿದ ಕಾರಣಕ್ಕೆ ಜೆಡಿಎಸ್‌ ಸೈದ್ಧಾಂತಿಕವಾಗಿ ಬದಲಾಗಿಲ್ಲ. ನಮ್ಮ ಸಿದ್ಧಾಂತವನ್ನು ಮೂಲೆಗುಂಪು ಮಾಡಿಲ್ಲ. ಸರ್ವ ಜನಾಂಗ, ಸರ್ವ ಸಮುದಾಯಕ್ಕೆ ರಾಜಕೀಯ ಹಾಗೂ ಸಾಮಾಜಿಕವಾಗಿ ಶಕ್ತಿಯನ್ನು ತುಂಬುವ ಕೆಲಸವನ್ನು ಜನತಾ ದಳ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದ ನಿರ್ಧಾರ ರಾಷ್ಟ್ರೀಯ ವರಿಷ್ಠರ ಮಟ್ಟದಲ್ಲಿ ನಿರ್ಧಾರವಾಗಿದೆ ಸ್ಥಳೀಯ ಮಟ್ಟದಲ್ಲಿ ಇದನ್ನು ಚರ್ಚಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

ಜೆಡಿಎಸ್‌ ಪಕ್ಷದ ಜಾತ್ಯಾತೀತತೆ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್‌ ನಾಯಕರು 2018ರ ಚುನಾವಣಾ ಫಲಿತಾಂಶ ನಂತರ ನಮ್ಮ ಪಕ್ಷದ ಮನೆಯ ಬಾಗಿಲಿಗೆ ಏಕೆ ಬಂದಿದ್ದರು? ನಮಗೆ ಸಿದ್ಧಾಂತ ಇಲ್ಲ, ಕೇಡರ್‌ ಇಲ್ಲ ಎಂದು ಚರ್ಚೆ ಮಾಡುವ ಕಾಂಗ್ರೆಸ್ಸಿನವರಿಗೆ ಆಗ ಗೊತ್ತಿರಲಿಲ್ವಾ? ಇವತ್ತಿಗೂ ನಾವು ಹೃದಯದಿಂದಲೇ ಜಾತ್ಯಾತೀತತೆ ಹೊಂದಿದ್ದೇವೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನ್ಯಾಚರಲ್ ಆಗಿರುವ ಮೈತ್ರಿ. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ಲೋಕಸಭೆ ಚುನಾವಣೆಯಲ್ಲಿ 19 ಜನ ಎನ್‌ಡಿಎ ಸಂಸದರು ಗೆದ್ದಿದ್ದಾರೆ. ಇದರಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮ ಅಡಗಿದೆ. ಬಿಜೆಪಿ-ಜೆಡಿಎಸ್‌ ಪರಸ್ಪರ ಪ್ರೀತಿ, ಗೌರವ, ಅಭಿಮಾನ ಹೊಂದಿದೆ. ನಮ್ಮ ಶಕ್ತಿಯನ್ನು ಅವರಿಗೆ ಹಾಗೂ ಅವರ ಶಕ್ತಿಯನ್ನು ನಮಗೆ ಧಾರೆ ಎರೆಯಲಾಗಿದೆ. ಜನತಾ ದಳ ತನ್ನದೇ ಆದ ಶಕ್ತಿ, ವರ್ಚಸ್ಸು ಹೊಂದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವಿಲೀನ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Nikil Kumaraswamy
ಗ್ಯಾರಂಟಿ ಯೋಜನೆ ಅಭಿವೃದ್ಧಿ ಮೇಲೆ ಪರಿಣಾಮ ಬೀರಿಲ್ಲ, ರಾಜ್ಯದ ಆರ್ಥಿಕತೆ ಬಲಿಷ್ಠವಾಗಿದೆ: ಎಚ್.ಎಂ ರೇವಣ್ಣ (ಸಂದರ್ಶನ)

ನಾವು ಈಗಾಗಲೇ ಮೈತ್ರಿಯ ವಿಮಾನ ಹತ್ತಿ ಕುಳಿತಿದ್ದೇವೆ. ವಿಮಾನ ಹಾರಾಟವಾದ ವೇಳೆ "ಟರ್ಬ್ಯೂಲೆನ್ಸ್" ಆಗುವುದು ಸಹಜ. ಆದರೆ, ವಿಮಾನ ಅಲುಗಾಡುತ್ತಿದೆ, ಈ ವಿಮಾನ ಹತ್ತಬಾರದಿತ್ತು ಎಂದು ನಾಲ್ಕೈದು ಜನರು ಹೇಳಿದರೆ, ಅದು ಆಗಲ್ಲ. ಯಾಕೆಂದರೆ, ಆಕಾಶದ ಮಧ್ಯೆಯಲ್ಲಿ ವಿಮಾನ ಇರುತ್ತದೆ. ಗುರಿಯ ಮುಟ್ಟಿ ಲ್ಯಾಂಡ್ ಆಗುವವರೆಗೂ ಸಮಾಧಾನದಿಂದ ಇರಬೇಕಾಗುತ್ತದೆ. ಇದಕ್ಕೆ ತಲೆಕಡೆಸಿಕೊಳ್ಳುವುದು ಬೇಡ. ಏನೇ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಸಹ ವರಿಷ್ಠರು ಸರಿಪಡಿಸುತ್ತಾರೆ ಎಂದು ಅವರು ವಿಶ್ಲೇಷಿಸಿದರು.

ಇದೇ ವೇಳೆ ಪಕ್ಷದಿಂದ ಬಹುತೇಕ ನಾಯಕರು ಹೊರಹೋಗುತ್ತಿದ್ದಾರೆ ಎಂಬ ಹೇಳಿಕೆಗಳನ್ನು ತಳ್ಳಿ ಹಾಕಿದ ಅವರು, ಜನತಾ ದಳ ಪಕ್ಷದಿಂದ ಸುಮಾರು 50 ಜನ ಶಾಸಕರು ರಾಜಕೀಯವಾಗಿ ಬೆಳೆದಿದ್ದಾರೆ. ಇಂದಿನ ಕಾಂಗ್ರೆಸ್‌ ಸರ್ಕಾರದಲ್ಲೂ ಮುಖ್ಯಮಂತ್ರಿಯಾದಿಯಾಗಿ ಸಚಿವ ಸಂಪುಟದಲ್ಲಿರುವ 9 ಜನ ಸಚಿವರು ಜನತಾ ದಳದ ಪ್ರೊಡೆಕ್ಟ್‌ಗಳೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿ. ಎಂ.ಪಿ.ಪ್ರಕಾಶ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಸಹ ಜೆಡಿಎಸ್.‌ ಹೀಗಾಗಿ ಜನತಾ ದಳದ ನಾಯಕರ ಸೃಷ್ಟಿಸುವ ಕಾರ್ಖಾನೆಯಾಗಿದೆ. ಕೆಲವರು ನಮ್ಮ ವೈಯಕ್ತಿಕ ಕಾರಣಗಳಿಂದ ಪಕ್ಷ ಬಿಟ್ಟಿರಬಹುದು. ಆದರೆ, ಜೆಡಿಎಸ್ ಇನ್ನೂ ಶಕ್ತಿಯುತ, ಸಧೃಡವಾಗಿ ಉಳಿದುಕೊಂಡಿದೆ ಎಂದು ಹೇಳಿದರು.

ಬಳಿಕ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ರಾಜ್ಯದ ಆರ್ಥಿಕತೆಯನ್ನು ಕಾಂಗ್ರೆಸ್ ಸರ್ಕಾರ ಹಾಳು ಮಾಡುತ್ತಿದೆ ಎಂದು ಆರೋಪಿಸಿದರು,

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಜೆಟ್ ನಿರ್ವಹಣೆಗೆ ವರ್ಷಕ್ಕೆ ಸುಮಾರು ರೂ.1 ಲಕ್ಷ ಕೋಟಿ ಸಾಲ ಮಾಡುತ್ತಿದೆ. ಇದು ದಿನಕ್ಕೆ ಸುಮಾರು ರೂ.300 ಕೋಟಿ ಸಾಲಕ್ಕೆ ಸಮಾನ ಎಂದು ಟೀಕಿಸಿದರು.

ಫೆಬ್ರವರಿ 27ರಂದು ವಿಜಯಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com