ಬಿಟಿ ಲಲಿತಾ ನಾಯಕ್ (ಸಂಗ್ರಹ ಚಿತ್ರ)
ಬಿಟಿ ಲಲಿತಾ ನಾಯಕ್ (ಸಂಗ್ರಹ ಚಿತ್ರ)

ದೇಗುಲ ತೀರ್ಥ ಕುಡಿಯಬಾರದು, ಅವೈಜ್ಞಾನಿಕ, ಕಾಂತಾರ 'ರಿಷಬ್'ಗೆ ಜನ ಹೊಡೆಯುತ್ತಿದ್ದರು!: ಬಿ.ಟಿ.ಲಲಿತಾ ನಾಯಕ್

ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು..ಅವೆಲ್ಲ ಅವೈಜ್ಞಾನಿಕವಾದದ್ದು, ಅವರು ಶುದ್ಧವಾಗಿ ಕೈತೊಳೆಯುವುದಿಲ್ಲ ಎಂದು ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.
Published on

ಹುಬ್ಬಳ್ಳಿ: ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು..ಅವೆಲ್ಲ ಅವೈಜ್ಞಾನಿಕವಾದದ್ದು, ಅವರು ಶುದ್ಧವಾಗಿ ಕೈತೊಳೆಯುವುದಿಲ್ಲ ಎಂದು ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿಟಿ ಲಲಿತಾ ನಾಯಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು. ಅವೆಲ್ಲ ಅವೈಜ್ಞಾನಿಕವಾದದ್ದು (unscientific), ಅವರು ಶುದ್ಧವಾಗಿ ಕೈತೊಳೆಯಲ್ಲ. ನಮ್ಮ ಮನೆಯಲ್ಲಿ ನೀರು ಇಲ್ವಾ? ಕೃಷ್ಣಯ್ಯ ಶೆಟ್ಟಿ ಗಂಗಾಜಲ ತಂದು ಕೊಟ್ಟರು, ಅಲ್ಲಿ ಹೆಣ ತೇಲುತ್ತೆ. ಅಲ್ಲಿ ಹೆಣ ಸುಟ್ಟು ಗಂಗಾ ನದಿಗೆ ಎಸೆಯುತ್ತಾರೆ ಎಂದು ಹೇಳಿದರು.

ಮಂಗಳ ಮುಖಿಯರಿಗೆ ಹಣವಲ್ಲ.. ಕೆಲಸ ನೀಡಿ
ಇದೇ ವೇಳೆ ಮಂಗಳ ಮುಖಿಯರು ದೇವರು ಅಂತೆ? ಅದು ತಪ್ಪು. ಯಾರಾದರೂ ಒಂಟಿಯಾಗಿ ಸಿಕ್ಕರೆ ಎತ್ತಿಹಾಕಿಕೊಂಡು ಹೋಗಿ ಕೊಂದು ಬಿಡುತ್ತಾರೆ. ಅಷ್ಟೊಂದು ಹಿಂಸೆಯನ್ನು ನೀಡುತ್ತಾರೆ. ಈ ಕುರಿತು ಸಾಕಷ್ಟು ಉದಾಹರಣೆ ಇವೆ. ಗಂಡಸರು ಕೂಡಾ ಆ ವೇಷವನ್ನು ಹಾಕಿಕೊಂಡು ಮಂಗಳಮುಖಿ ಅಂತಾರೆ. ಅವರನ್ನು ದುಡಿಸಿಕೊಳ್ಳುವ ಕೆಲಸವಾಗಬೇಕು ಎಂದು ಲಲಿತಾ ನಾಯಕ್ ಹೇಳಿದರು.

ದೈವ ನರ್ತಕರ ಮಾಸಾಶನಕ್ಕೆ ವಿರೋಧ
ಇದೇ ವೇಳೆ ದೈವ ನರ್ತಕರ ಮಾಸಾಶನಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, 'ರಾಜ್ಯ ಸರ್ಕಾರ ದೈವ ನರ್ತಕರಿಗೆ ಮಾಸಾಶನ ನೀಡಬಾರದು. ಯಾರೋ ನೋವಿನಿಂದ ಕೂಗಿದವರನ್ನು ದೇವರು ಎಂದರು. ಈಗಿರುವ ಎಲ್ಲಾ ದೇವರು ಮನುಷ್ಯರೇ. ಇದೊಂದು ಸುಳ್ಳು ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು. 2 ಸಾವಿರ ರೂ. ಮಾಸಾಶನ ನೀಡುವ ಬದಲು ಉದ್ಯೋಗ ನೀಡಿ. ಮಾನವ ಶ್ರಮವನ್ನು ಸರ್ಕಾರ ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ದೇವರು ನಾನು ಅಂತಾ ಕುಣಿದಾಗ, ಅದಕ್ಕೆ ಎರಡು ಸಾವಿರ ಕೊಟ್ಟರೆ ಅದು ಸಾಲಲ್ಲ ಮುಂದೆ ಆತ ಮೌಡ್ಯವನ್ನು ಬಿತ್ತುತ್ತಾನೆ. ಸಾರ್ವಜನಿಕ ಹಣವನ್ನು ಸರ್ಕಾರ ಪೋಲು ಮಾಡಬಾರದು. ಅರ್ಚಕರು ಹಾಗೂ ಮೌಲ್ವಿಗಳಿಗೂ ಮಾಸಾಶನ ನೀಡಬಾರದು. ದೇವಸ್ಥಾನದಲ್ಲಿ ನಮಗೆ ಜ್ಞಾನ ಸಿಗಲ್ಲ. ಗ್ರಂಥಾಲಯ, ಶಾಲೆಗಳಲ್ಲಿ ಮಾತ್ರ ನಮಗೆ ಜ್ಞಾನ ಸಿಗುವುದು ಎಂದು ಹೇಳಿದರು.

ನೇರವಾಗಿ ಹೇಳಿದ್ದರೆ ಕಾಂತಾರ ರಿಷಬ್ ಗೆ ಮೂರ್ಖ ಜನ ಹೊಡೆಯುತ್ತಿದ್ದರು!
‘ಭೂತಾರಾಧನೆ ಸಮಯದಲ್ಲಿ ದೇವರು ಬರೋದು ಸತ್ಯ ಅಲ್ಲವೇ ಅಲ್ಲ. ದೈವ ನರ್ತಕರು ಓಹೋ ಅಂತ ಚಿರಾಡುವುದು, ಕುಣಿಯುವುದು, ದೇವರು ಮೈಮೇಲೆ ಬರುವುದರಿಂದ ಅಲ್ಲ. ಅದಕ್ಕೆ ಬೇರೆ ಕಾರಣವಿದೆ. ರಿಷಬ್ ತನ್ನ ವಿಚಾರವನ್ನು ನೇರವಾಗಿ ಹೇಳಿ ಹೊಡಿಸಿಕೊಳ್ಳಲು ತಯಾರಿಲ್ಲ. ಹೀಗಾಗಿ ಈ ಮಾರ್ಗ ಅನುಸರಿಸಿದ್ದಾನೆ. ಆತ ತನ್ನ ವಿಚಾರವನ್ನು ನೇರವಾಗಿ ಹೇಳಿದ್ರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆಯುತ್ತಾರೆ, ಪರದೆಗೆ ಬೆಂಕಿ ಹಚ್ಚುತ್ತಾರೆ.

ಕೆಲವು ಜನರ ತಲೆ ಅಷ್ಟರಮಟ್ಟಿಗೆ ಕೆಟ್ಟಿದೆ. ಸತ್ಯವನ್ನು ನೇರವಾಗಿ ಹೇಳಿದರೇ ಆತನನ್ನು ಕೊಂದು ಹಾಕುತ್ತಾರೆ. ಇದು ಆತನಿಗೆ ಬೇಕಿಲ್ಲ. ಆತ ಇನ್ನೂ ಬದುಕು ಬೇಕು ಅಂತ ಬಹಳಷ್ಟು ಬುದ್ದಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ. ಕಾಂತಾರ ಸಿನಿಮಾ ನೋಡಲು ಬಹಳಷ್ಟು ಬುದ್ಧಿವಂತಿಕೆ ಬೇಕು. ಕಾಂತಾರ ಕಾಡಿನ ಜನರ ನೋವಿನ ಕಥೆ. ಅವರಿಗೆ ಜಮೀನ್ದಾರಿ ಪದ್ಧತಿಯ ಮೂಲಕ ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಬಹಳಷ್ಟು ಚಿತ್ರಹಿಂಸೆ ನೀಡಿದರು. ಹೀಗಾಗಿ ಅವರು ತಮ್ಮ ಉಳಿವಿಗಾಗಿ ಪೊಲೀಸರ ಮತ್ತು ಸರ್ಕಾರದ ಮೊರೆ ಹೋದರು. ಅವರಿಂದ ನ್ಯಾಯ ಸಿಗದೆ  ಚಿರಾಡಿ ಚಿರಾಡಿ ತಮ್ಮ ನೋವು ಹೊರಹಾಕಿದರು. ಅದನ್ನೇ ದೈವ ಅಂತ ನಂಬಲಾಗುತ್ತಿದೆ ಎಂದು ಲಲಿತಾ ನಾಯಕ್ ಹೇಳಿದ್ದಾರೆ.

ರಾಜಕೀಯ ಕಾರಣಕ್ಕೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ
ಇದೇ ವೇಳೆ, ನಾನು ರಾಜಕೀಯವಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರಲ್ಲಿಲ್ಲ. ಭೂಮಿ ಸಮಸ್ಯೆ ಬಗ್ಗೆ ವಿವರಣೆ ನೀಡಲು ರಾಹುಲ್ ಗಾಂಧಿ ಭೇಟಿ ಮಾಡಿದ್ದೆ. ಈ ವೇಳೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಒಂದಿಷ್ಟು ಹೆಜ್ಜೆ ಹಾಕಿದೆ ಅಷ್ಟೇ. ಆದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ವಿರೋಧ
ಅಂಕೋಲಾ-ಹುಬ್ಬಳಿ ರೈಲು ಮಾರ್ಗ ನಿರ್ಮಾಣಕ್ಕೆ ನನ್ನ ವಿರೋಧವಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾಡು ಕಡಿಯುವುದು ಸರಿಯಲ್ಲ‌. ಉದ್ಯೋಗ ಸೃಷ್ಟಿಸಲು ಅಭಿವೃದ್ಧಿ ಮಾಡಲು ರೈಲು ಮಾರ್ಗ ಒಂದೆ ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ.

ಜನತಾ ಪಕ್ಷ ಮರುಸ್ಥಾಪನೆ
ಸದ್ಯ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದೇಶವನ್ನು ಅಭಿವೃದ್ಧಿ ಮಾಡುವ ಬದಲು ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿವೆ. ಖಾಸಗೀಕರಣದ ಮೂಲಕ ಜನರ ಆಸ್ತಿ ಮಾರಾಟ ಮಾಡಲಾಗುತ್ತಿದೆ. ಕೋಮುವಾದನ್ನು ಯುವಕರ ಮನಸ್ಸಿನಲ್ಲಿ ಬಿತ್ತಿ ಅವರು ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ. ಹಣ, ಹೆಂಡದ ಮೂಲಕ ಚುನಾವಣೆಯಲ್ಲಿ ಗೆದ್ದು ಈ ರೀತಿಯಾಗಿ ವರ್ತನೆ ಮಾಡುತ್ತಿದೆ. ಹೀಗಾಗಿ ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಜನತಾ ಪಕ್ಷವನ್ನು ಮರು ಸ್ಥಾಪನೆ ಮಾಡಲಾಗಿದ್ದು. ಈ ಬಾರಿ 224 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ನಿಲ್ಲುತ್ತಿದ್ದಾರೆ ಎಂದರು.

ಬಿ.ಟಿ.ಲಲಿತಾ ನಾಯಕ್ ಹೇಳಿಕೆಗೆ ಯು.ಟಿ ಖಾದರ್ ವಿರೋಧ
ಇನ್ನು ದೈವ ನರ್ತಕರಿಗೆ ಮಾಸಾಶನ ನೀಡಬಾರದು ಎಂಬ ಹೇಳಿಕೆಗೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು. ಟಿ ಖಾದರ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಅವರು, ಮಾನ್ಯ ಬಿ.ಟಿ ಲಲಿತಾ ನಾಯಕ್ ಅವರೇ ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ ದೈವ ನರ್ತಕರಿಗೆ ನೀಡಿರುವ ಮಾಶಾಸನ ಸರಿ ಅಲ್ಲ ಎಂಬ ಮಾತನ್ನ ನಾನು ಒಪ್ಪಲು ಸಿದ್ದವಿಲ್ಲ. ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ. ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ ಹಾಗೂ ಕರಾವಳಿ ಸಂಸ್ಕೃತಿಯನ್ನ ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರು ಚಿಂತನೆ ಮಾಡುವುದು ಒಳಿತು ಎಂದು ಖಾರವಾಗಿ ಹೇಳಿದ್ದಾರೆ.

ಇತ್ತೀಚೆಗೆ ನಟ ಚೇತನ್‌ ಕರಾವಳಿ ಭಾಗದ ಭೂತಾರಾಧನೆ ಬಗ್ಗೆ ಹೇಳಿದ್ದಕ್ಕೆ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದು ಮಾತ್ರವಲ್ಲದೆ, ದೂರು ಕೂಡ ದಾಖಲಾಗಿತ್ತು. ಚಿತ್ರರಂಗದಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಈಗ ಅದರ ಸಾಲಿಗೆ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್‌ ಕೂಡ ಸೇರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com