ಬೆಂಗಳೂರು: ಕರ್ನಾಟಕ ರಾಜ್ಯ ಸಿರಿಧಾನ್ಯಗಳ ಬೆಳೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯು ಗೊತ್ತುಪಡಿಸಿದ 2023 ನೇ ವರ್ಷವನ್ನು 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ಎಂದು ಆಚರಿಸುವ ಪ್ರಯತ್ನದ ಭಾಗವಾಗಿ, ಜನರಲ್ಲಿ ಅದರ ಬಳಕೆಯನ್ನು ಹೆಚ್ಚಿಸುವ ಮೂಲಕ ಬೆಳೆಯನ್ನು ಉತ್ತೇಜಿಸಲು ಸರ್ಕಾರ ಯೋಜಿಸುತ್ತಿದೆ. ಮಕ್ಕಳು ಮತ್ತು ಯುವಕರಲ್ಲಿ ಸಿರಿಧಾನ್ಯಗಳ ಬಳಕೆಯ ವಿಶೇಷ ಅರಿವು ಮೂಡಿಸುವುದು ಮತ್ತು ರೈತರಿಗೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುವುದು ಕೂಡ ಇದರ ಉದ್ದೇಶವಾಗಿದೆ.
ಕೃಷಿ ಇಲಾಖೆಯು ಸಾರ್ವಜನಿಕ ಶಿಕ್ಷಣ, ಉನ್ನತ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ಸಿರಿಧಾನ್ಯಗಳ ಬಳಕೆಯನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸಲು ಮುಂದಾಗಿದೆ.
ಪ್ರಸ್ತುತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ರಾಗಿ ಮತ್ತು ಜೋಳದಂತಹ ಧಾನ್ಯಗಳನ್ನು ಪೂರೈಸುತ್ತಿದೆ.
ಈ ಬಗ್ಗೆ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಕೃಷಿ ಸಚಿವ ಬಿ ಸಿ ಪಾಟೀಲ್, ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ರಾಗಿಯನ್ನು ನೀಡಲು ನಾವು ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದೇವೆ. ಪ್ರದೇಶಗಳಿಗನುಗುಣವಾಗಿ 'ರಾಗಿ ಮುದ್ದೆ'ಯಿಂದ 'ಜೋಳದ ರೊಟ್ಟಿಯವರೆಗೆ ಆಹಾರವನ್ನು ಪರಿಚಯಿಸಲಾಗುವುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಹಾಸ್ಟೆಲ್‌ಗಳಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸಲು ತಿಳಿಸಲಾಗಿದೆ. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕೇಂದ್ರಗಳಲ್ಲಿ ಸಿರಿಧಾನ್ಯಗಳನ್ನು ಪರಿಚಯಿಸಲಿದೆ.
ಈ ಬಗ್ಗೆ ಸಚಿವ ಬಿ ಸಿ ಪಾಟೀಲ್, ಯುವ ಪೀಳಿಗೆ ಪೌಷ್ಟಿಕ ಆಹಾರ ಸೇವಿಸಬೇಕು ಎಂಬುದು ನಮ್ಮ ಆಶಯ. ಬಲಿಷ್ಠ ಮುಂದಿನ ಪೀಳಿಗೆಯನ್ನು ನಿರ್ಮಿಸಬೇಕು. ನಮ್ಮ ರೈತರಿಗೂ ಉತ್ತಮ ಆದಾಯ ಸಿಗುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.
ಕಾಲೇಜು ಕ್ಯಾಂಟೀನ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿ ಸಿರಿಧಾನ್ಯಗಳನ್ನು ಸೇರಿಸುವಂತೆ ಒತ್ತಾಯಿಸಲು ಖಾಸಗಿ ಕಾಲೇಜುಗಳನ್ನು ಸಂಪರ್ಕಿಸಲು ಸರ್ಕಾರ ನಿರ್ಧರಿಸಿದೆ. ಸಿರಿಧಾನ್ಯಗಳಿಂದ ಮಾಡಬಹುದಾದ ಅನೇಕ ಪಾಕವಿಧಾನಗಳಿವೆ. ಈ ಪ್ರಸ್ತಾವನೆಯನ್ನು ಖಾಸಗಿ ಕಾಲೇಜುಗಳು ಒಪ್ಪಿಕೊಂಡರೆ ನಮ್ಮ ರೈತರಿಗೆ ಹೊಸ ಮಾರುಕಟ್ಟೆ ತೆರೆದಂತಾಗುತ್ತದೆ ಎಂದು ಬಿ.ಸಿ.ಪಾಟೀಲ ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿನ ಕೃಷಿ ಸಚಿವ ಕೃಷ್ಣ ಭೈರೇಗೌಡ, ಕೇಂದ್ರ ಮಟ್ಟದಲ್ಲಿ ಹಾಗೂ ರಾಜ್ಯದಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಬಲವಾಗಿ ಪ್ರತಿಪಾದಿಸಿದ್ದರು. ಅವರ ಪ್ರಯತ್ನದಿಂದ ಕೇಂದ್ರವು 2018 ನೇ ವರ್ಷವನ್ನು 'ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ಎಂದು ಘೋಷಿಸಲು ಕಾರಣವಾಯಿತು ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement