ಹೊತ್ತಿ ಉರಿದ ಖಾಸಗಿ ಬಸ್: ಚಾಲಕನ ಸಮಯ ಪ್ರಜ್ಞೆಯಿಂದ 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!

ಪೂನಾದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್'ಗೆ ಬೆಂಕಿ ಹೊತ್ತಿಕೊಂಡು ಉರಿದು ಹೋಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಬ್ಭಳ್ಳಿ-ಧಾರವಾಡ ಬೈಪಾಸ್ ಸಮೀಪದ ಕಾರವಾರ ರಸ್ತೆಯ ಬಳಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಧಾರವಾಡ: ಪೂನಾದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್'ಗೆ ಬೆಂಕಿ ಹೊತ್ತಿಕೊಂಡು ಉರಿದು ಹೋಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಬ್ಭಳ್ಳಿ-ಧಾರವಾಡ ಬೈಪಾಸ್ ಸಮೀಪದ ಕಾರವಾರ ರಸ್ತೆಯ ಬಳಿ ನಡೆದಿದೆ.

ರೇಷ್ಮಾ ಟ್ರಾವೆಲ್ಸ್ ಕಂಪನಿಗೆ ಸೇರಿದ ಖಾಸಗಿ ಬಸ್ ಪೂನಾದಿಂದ ಉಡುಪಿಯತ್ತ ಸಾಗುತ್ತಿತ್ತು. ಹುಬ್ಭಳ್ಳಿ-ಧಾರವಾಡ ಬೈಪಾಸ್ ಸಮೀಪದ ಕಾರವಾರ ರಸ್ತೆ ಬಳಿ ಶನಿವಾರ ತಡರಾತ್ರಿ 2.40ರ ಸುಮಾರಿಗೆ ಹಿಂದಿನ ಚಕ್ರ ಸ್ಫೋಟಗೊಂಡು ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರಿಗೆ ಮಾಹಿತಿ ನೀಡಿ ಕೆಳಗೆ ಇಳಿಸಿದ್ದಾನೆ. ಬಹುತೇಕ ಎಲ್ಲಾ ಪ್ರಯಾಣಿಕರು ಬೆಳಗಿನ ಜಾವದ ನಿದ್ರೆಯಲ್ಲಿದ್ದಾಗ ಅವಘಟ ಸಂಭವಿಸಿದೆ.

ಬಸ್'ನ ಪಕ್ಕದ ಬಾಗಿಲು ಹಾಗೂ ಹಿಂದಿನ ಭಾಗದ ತುರ್ತು ಬಾಗಿಲಿನ ಮೂಲಕ ಪ್ರಯಾಣಿಕರು ಹೊರ ಬಂದಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ತಮ್ಮ ಸಾಮಾನು, ಸರಂಜಾಮು ತೆಗೆದುಕೊಂಡು ಇಳಿದಿದ್ದರೆ, ಇನ್ನು ಕೆಲವರು ಕೈಗೆ ಸಿಕ್ಕ ಅಗತ್ಯ ವಸ್ತುಗಳನ್ನು ತಮ್ಮ ಜೊತೆ ತೆಗೆದುಕೊಂಡು ಇಳಿದಿದ್ದಾರೆ. ಜೀವ ಉಳಿಸಿಕೊಂಡರೆ ಸಾಕು ಎಂಬಂತಾಗಿತ್ತು ಅವರ ಪರಿಸ್ಥಿತಿ.

ಬಳಿಕ ಪ್ರಯಾಣಿಕರನ್ನು ಪ್ರತ್ಯೇಕ ಬಸ್ ಮೂಲಕ ಅವರವರ ಊರಿಗೆ ಕಳುಹಿಸಲಾಯಿತು. ಪ್ರಯಾಣಿಕರು ಬಸ್ ನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಸಂಪೂರ್ಣ ಆವರಿಸಿದ್ದರಿಂದ ಬಸ್ ಬಹುತೇಕ ಸುಟ್ಟು ಕರಕಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ನಿರಂತರ 2ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com