ಐವರು ವೀರ ಮಕ್ಕಳಿಗೆ ಶೌರ್ಯ ಪ್ರಶಸ್ತಿ
ಬೆಂಗಳೂರು: ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಬಾಲಭವನದಲ್ಲಿ ಐವರು ಮಕ್ಕಳಿಗೆ ಸೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪಡೆದ ಎಲ್ಲಾ ಐವರೂ ಮಕ್ಕಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ಕಳೆದ ವರ್ಷ ಅಪ್ರತಿಮ ಸಾಹಸ ತೋರಿದ ಹಿನ್ನೆಲೆಯಲ್ಲಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಸೋಮವಾರ ನಡೆದ ಮಕ್ಕಳ ದಿನಾಚರಣೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಲ್ವರು ಬಾಲಕಿಯರು ಹಾಗೂ ಒಬ್ಬ ಬಾಲಕನನ್ನು ಸನ್ಮಾನಿಸಲಾಯಿತು.
ಕೊಡಗು ಜಿಲ್ಲೆಯ ನಮ್ರತಾ ಅವರು ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ಧರೊಬ್ಬರನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಪ್ರಾರ್ಥನಾ ಎಂಬ ಬಾಲಕಿ ವಿದ್ಯುತ್ ಶಾಕ್ ತಗುಲಿದ್ದ ತನ್ನ ಸಹೋದರನನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿದ್ದರು.
ರಸ್ತೆ ಅಪಘಾತದಿಂದ ಜೀಪ್‌ನಲ್ಲಿ ಸಿಲುಕಿಕೊಂಡಿದ್ದ ತನ್ನ ತಂದೆಯನ್ನು ಕಾರವಾರ ಜಿಲ್ಲೆಯ ಕೌಶಲ್ಯ ವೆಂಕಟರಮಣ ರಕ್ಷಿಸಿದ್ದರು.
ರೈಲು ಹಳಿ ದಾಟುವಾಗ ಸಿಲುಕಿಕೊಂಡಿದ್ದ ವೃದ್ಧೆಯನ್ನು ಹಳಿಯಿಂದ ದೂರಕ್ಕೆ ಎಳೆದು ಚಿಕ್ಕಮಗಳೂರು ಜಿಲ್ಲೆಯ ಕಾವ್ಯಾ ಭಾಸ್ಕರ್ ಹೆಗಡೆ ಎಂಬ ಬಾಲಕಿ ರಕ್ಷಣೆ ಮಾಡಿದ್ದಳು.
ಹಳ್ಳಕ್ಕೆ ಬಿದ್ದ ಜೀಪಿನ ಗಾಜನ್ನು ಮೆಟಲ್ ಬಾಟಲಿಯಿಂದ ಒಡೆದು ನೀರನ್ನು ಹೊರ ಹಾಕಿ ತಂದೆ, ತಾಯಿಯನ್ನು ದಾವಣಗೆರೆ ಜಿಲ್ಲೆಯ ಕೀರ್ತಿ ವಿವೇಕ್ ಎಂ.ಸಾಹುಕಾರ್ ಎಂಬ ರಕ್ಷಣೆ ಮಾಡಿದ್ದ. ಈ ಐವರೂ ಮಕ್ಕಳಿಗೆ ನಿನ್ನೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ, ಮಕ್ಕಳಿಗೆ 10,000 ರೂಪಾಯಿ ನಗದು ಬಹುಮಾನವನ್ನೂ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ