ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ 24/7 ಸಹಾಯವಾಣಿ ಆರಂಭ: ಸಚಿವ ಸುಧಾಕರ್

ರೋಗಿಗಳು ಅಥವಾ ಅವರ ಸಂಬಂಧಿಕರು ಆರೋಗ್ಯ ಸೇವೆಗಳನ್ನು ಪಡೆಯಲು ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಸಾಮಾನ್ಯ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ 24/7 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಬುಧವಾರ ಹೇಳಿದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ನವಜಾತ ಶಿಶುವನ್ನು ಎತ್ತಿಕೊಂಡಿದ್ದ ಮಹಿಳೆಯೊಂದಿಗೆ ಮಾತನಾಡುತ್ತಿರುವುದು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ನವಜಾತ ಶಿಶುವನ್ನು ಎತ್ತಿಕೊಂಡಿದ್ದ ಮಹಿಳೆಯೊಂದಿಗೆ ಮಾತನಾಡುತ್ತಿರುವುದು.

ತುಮಕೂರು: ರೋಗಿಗಳು ಅಥವಾ ಅವರ ಸಂಬಂಧಿಕರು ಆರೋಗ್ಯ ಸೇವೆಗಳನ್ನು ಪಡೆಯಲು ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಸಾಮಾನ್ಯ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ 24/7 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಅವರು ಬುಧವಾರ ಹೇಳಿದರು.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಗರ್ಭಿಣಿ ಕಸ್ತೂರಿ (30) ಹಾಗೂ ಆಕೆಯ ನವಜಾತ ಶಿಶುಗಳು ಸಾವನ್ನಪ್ಪಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಕರ್ತವ್ಯದಲ್ಲಿದ್ದ ವೈದ್ಯರ ಹಾಗೂ ಆಸ್ಪತ್ರೆಯ ಮೂವರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ತುಮಕೂರು ಜಿಲ್ಲೆ ಆಸ್ಪತ್ರೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಸಹಾಯ ಕೇಂದ್ರಗಳು ಗಡಿಯಾರದ ಮುಳ್ಳುಗಳಂತೆ ಕೆಲಸ ಮಾಡಲಿದೆ. ಪ್ರತಿ ಶಿಫ್ಟ್‌ನಲ್ಲಿ ಇಬ್ಬರು ನಾಲ್ಕು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ, ಇದರಿಂದ ಯಾವುದೇ ರೋಗಿಯು ಚಿಕಿತ್ಸೆ ಪಡೆದುಕೊಳ್ಳಲು ಸಮಸ್ಯೆಗಳಾಗುವುದಿಲ್ಲ. ಸಿಬ್ಬಂದಿಯನ್ನು ನೇಮಿಸುವ ಅಧಿಕಾರ ಆಸ್ಪತ್ರೆ ಅಧಿಕಾರಿಗಳಿಗೆ ಇದೆ ಎಂದು ಹೇಳಿದರು.

ಇದೇ ವೇಳೆ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಉಷಾ ಅವರನ್ನು ಅಮಾನತುಗೊಳಿಸಿರುವುದನ್ನು ಸಮರ್ಥಿಸಿಕೊಂಡ ಸಚಿವರು, ಸಂತ್ರಸ್ತೆಗೆ ಚಿಕಿತ್ಸೆ ನಿರಾಕರಿಸಿದಾಗ ಅವರು ಸ್ಥಳದಲ್ಲಿಯೇ ಇದ್ದರು. ಆರೋಗ್ಯ ಇಲಾಖೆ ನಿರ್ದೇಶಕರು ಲೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

“ತಾಂತ್ರಿಕ ಬೆಳವಣಿಗೆಗಳ ಹೊರತಾಗಿಯೂ ಗರ್ಭಿಣಿಯರು ಹೆರಿಗೆಯ ಸಮಯದಲ್ಲಿ ಸಾಯುವುದು ನಮ್ಮ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವಾಗ ವೈದ್ಯರು ಜಾಗರೂಕರಾಗಿರಬೇಕು, ”ಎಂದು ತಿಳಿಸಿದರು.

ಇದೇ ವೇಳೆ ನೂತನ ಟ್ರಾಮಾ ಕೇರ್ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ಹಾಗೂ ತಾಯಿ-ಮಗುವಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನು ಪರಿಶೀಲಿಸಿ ಮಾನವ ಸಂಪನ್ಮೂಲದ ಅಗತ್ಯತೆ ಕುರಿತು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದರು.

ಮೃತ ಕಸ್ತೂರಿಯವರ ಪುತ್ರಿಗೆ ರೂ.10 ಲಕ್ಷ ಪರಿಹಾರ
ಕಸ್ತೂರಿ ಅವರ ಆರು ವರ್ಷದ ಮಗಳಿಗೆ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸುಧಾಕರ್ ಘೋಷಿಸಿದರು.

ಈ ಹಣವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿಯಲ್ಲಿ ಇರಿಸಲಾಗುತ್ತದೆ ಮತ್ತು ಬಾಲಕಿಗೆ 18 ವರ್ಷ ವಯಸ್ಸಾದ ಬಳಿಕ ಅದನ್ನು ಶೈಕ್ಷಣಿಕ ವೆಚ್ಚಗಳಿಗೆ ಬಳಸಿಕೊಳ್ಳಬಹುದು. ಅಲ್ಲಿಯವರೆಗೂ ಶಿಕ್ಷಣ ಸೇರಿದಂತೆ ಆಕೆಯ ರಕ್ಷಣೆಗೆ ಸರಕಾರ ನೆರವು ನೀಡಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com