

ಬೆಂಗಳೂರು: ಬೆಂಗಳೂರಿನ ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನದ ಪಾರಂಪರಿಕ ಕಡಲೆಕಾಯಿ ಪರಿಷೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಚಾಲನೆ ನೀಡಿದರು.
ನಂತರ ತುಲಾಭಾರ ಮಾಡಿ ಮೊದಲ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿದ ಸಿಎಂ ಬೊಮ್ಮಾಯಿ, ನೆರೆದಿದ್ದವರಿಗೆ ಕಡ್ಲೆಕಾಯಿ ಅಳೆದುಕೊಟ್ಟರು. ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಮಣ್ಯ, ಉದಯ ಗರುಡಾಚಾರ್, ಮತ್ತಿತರರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಮುಖ್ಯಮಂತ್ರಿ, ಬಸವನಗುಡಿಯಲ್ಲಿ ಪಾರಂಪರಿಕ ಪಾರ್ಕ್ ನಿರ್ಮಾಣವನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಘೋಷಿಸಿ, ಅನುದಾನ ಒದಗಿಸಲಾಗುವುದು,ಕೆಂಪಾಪುರ ಕೆರೆಗೆ ಮುಂದಿನ ಬಜೆಟ್ ನಲ್ಲಿ ಅನುದಾನ ಒದಗಿಸಿ ಅಭಿವೃದ್ಧಿ ಗೊಳಿಸಲಾಗುವುದು. ಬೆಂಗಳೂರಿನಲ್ಲಿ ಗ್ರಾಮೀಣ ಸೃಷ್ಟಿಯಾಗಿದೆ. ನಾವೆಲ್ಲರೂ ಒಂದು ಎನ್ನುವ ಭಾವದಿಂದ ಇಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದರು.
ಕಡಲೇಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಈ ಕ್ಷೇತ್ರದಲ್ಲಿ ಬಸವ ಫಸಲು ನಾಶ ಮಾಡುತ್ತಿತ್ತು. ಪ್ರತಿ ವರ್ಷ ಮೊದಲ ಫಸಲು ಅರ್ಪಿಸುವುದಾಗಿ ಪ್ರಾರ್ಥಿಸಿದಾಗ ಬಸವಣ್ಣ ಒಪ್ಪಿದ ಕಥೆ ಇದರ ಹಿಂದಿದೆ. ಬಸವನ ಆಶೀರ್ವಾದ ಪಡೆದ ಈ ಕ್ಷೇತ್ರ ಬಸವನಗುಡಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಇನ್ನೂ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯಲಿದ್ದು, ಬುಲ್ ಟೆಂಪಲ್ ರಸ್ತೆಯಲ್ಲಿ ಜನದಟ್ಟಣೆ ಕಂಡುಬಂದಿತು.
Advertisement