ಮಂಗಳೂರು ಆಟೋ ಸ್ಫೋಟ ಆಕಸ್ಮಿಕವಲ್ಲ, ಉಗ್ರ ಕೃತ್ಯ: ಡಿಜಿಪಿ ಪ್ರವೀಣ್ ಸೂದ್

ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ, ಇದೊಂದು ಉಗ್ರರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಅವರು ಸ್ಪಷ್ಟಪಡಿಸಿದ್ದಾರೆ.
ಬಾಂಬ್ ಸ್ಫೋಟಗೊಂಡ ಆಟೋ.
ಬಾಂಬ್ ಸ್ಫೋಟಗೊಂಡ ಆಟೋ.

ಮಂಗಳೂರು: ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ, ಇದೊಂದು ಉಗ್ರರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಅವರು ಸ್ಪಷ್ಟಪಡಿಸಿದ್ದಾರೆ.

ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸ್ಫೋಟ ಪ್ರಕರಣ ಸಂಬಂಧ ಸ್ಪಷ್ಟ ಮಾಹಿತಿಗಳು ಲಭ್ಯವಾಗಿದ್ದು, ಇದು ಆಕಸ್ಮಿಕ ಸ್ಫೋಟವಲ್ಲ. ಇದೊಂದು ಉಗ್ರ ಕೃತ್ಯವಾಗಿದೆ. ಸ್ಫೋಟದ ಸಂಭವಿಸಿದ ಸಂದರ್ಭದಲ್ಲಿ ಸುತ್ತಮುತ್ತಲೂ ಜನರು ಇಲ್ಲದ ಕಾರಣ ದೊಡ್ಡ ಹಾನಿಯೊಂದು ತಪ್ಪಿದಂತಾಗಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಆಳವಾದ ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.

ನಗರದ ನಾಗುರಿಯಿಂದ ಪಂಪ್ ವೆಲ್ ಕಡೆಗೆ ಆಟೋರಿಕ್ಷಾವೊಂದು ಸಂಚರಿಸುತ್ತಿತ್ತು. ನಾಗುರಿಯಲ್ಲಿ ಆಟೋ ರಿಕ್ಷಾ ಏರಿಪ್ಪ ಪ್ರಯಾಣಿಕನ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ದಾರಿ ಮಧ್ಯೆ ದಿಢೀರ್ ನಿಗೂಢವಾಗಿ ಬೆಂಕಿ ಕಾಣಿಸಿಕೊಂಡು, ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದ ವ್ಯಕ್ತಿ ಹಾಗೂ ಆಟೋ ಚಾಲಕನಿಗೆ ಬೆಂಕಿ ತಗುಲಿದ್ದು, ಆಟೋ ಒಳಭಾಗ ಕೂಡ ಸುಟ್ಟು ಕರಕಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಸಂಶಯಾಸ್ಪದ ವಸ್ತುಗಳು ಪತ್ತೆ
ಈ ನಡುವೆ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್‌ ಹಾಗೂ ವಿಧಿವಿಜ್ಞಾನ ಇಲಾಖೆಯ ತಜ್ಞರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಸ್ಫೋಟಗೊಂಡ ಆಟೋದಲ್ಲಿ ನಟ್ ಬೋಲ್ಟ್​​ಗಳು ಮತ್ತು ಬ್ಯಾಟರಿ ಪತ್ತೆ ಆಗಿದೆ. ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಸಹ ಕಂಡು ಬಂದಿವೆ.

ಲಘು ತೀವ್ರತೆ ಇರುವ ಸ್ಫೋಟಕ ಬಳಸಿರುವ ಶಂಕೆ ವ್ಯಕ್ತವಾಗುತ್ತಿದ್ದು, ಸ್ಥಳದಲ್ಲಿ ಅತೀ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದೀಗ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಧಾವಿಸಿದ್ದು, ತೀವ್ರ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

ಪ್ರಯಾಣಿಕನ ಮೇಲೆ ಶಂಕೆ

ಘಟನೆಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕನ ಬಗ್ಗೆ ಇದೀಗ ಅನುಮಾನಗಳು ವ್ಯಕ್ತವಾಗಿವೆ. ಗಾಯಾಳು ಕಾರ್ಮಿಕ ಉತ್ತರಪ್ರದೇಶ ನಿವಾಸಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರೇಮ್​ ರಾಜ್​​ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ಆತನ ಬಾಕ್ಸ್​​​, ಬ್ಯಾಗ್​​ನಿಂದಲೇ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ.

ಈತ ಹಿಂದಿ ಭಾಷೆ ಮಾತನಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ, ಆಟೋ ಪ್ರಯಾಣಿಕನ ತನಿಖೆ ವೇಳೆ ಅಸ್ಪಷ್ಟ ಮಾಹಿತಿ ಸಿಕ್ಕಿದೆ. ಈತ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆಂದು ತಿಳಿದುಬಂದಿದೆ.

ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು, ಅಣ್ಣ ಬಾಬುರಾವ್ ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದ. ಆ ನಂಬರ್​ಗೆ ಕರೆ ಮಾಡಿದಾಗ ಆತ ತನ್ನ ಸಂಬಂಧಿಕನೇ ಅಲ್ಲ, ಆತ ತನ್ನ ರೂಮ್ ನಲ್ಲಿದ್ದ, ಬೆಂಗಳೂರಿಗೆ ಹೋಗುತ್ತೇನೆಂದು ಹೋಗಿದ್ದ ಎಂದಿದ್ದಾನೆ. ಆತನ ಬಗ್ಗೆ ಬೇರೆ ಗೊತ್ತಿಲ್ಲ ಎಂದಿದ್ದಾನೆ. ಹೀಗಾಗಿ ಗಾಯಗೊಂಡ ಪ್ರಯಾಣಿಕನ ಬಗ್ಗೆ ಅನುಮಾನ ಹೆಚ್ಚಾಗಿದೆ.

ಎನ್ಐಎ ತಂಡ ಮಂಗಳೂರಿಗೆ ಭೇಟಿ ಸಾಧ್ಯತೆ
ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಫೋಟ ಸಂಭವಿಸಿದ್ದು, ಘಟನೆಯನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡ ಮಂಗಳೂರಿಗೆ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.

ಮಂಗಳೂರು ಪೊಲೀಸರು ಇಡೀ ಘಟನೆ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸುತ್ತಿದ್ದು, ಇಂದು ಎನ್ಐಎ ತಂಡ ಮಂಗಳೂರಿಗೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಲಾಗಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಹಿರಿಯ ಅಧಿಕಾರಿಗಳಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮಾಹಿತಿ ಪಡೆದ ಸಿಎಂ ಬೊಮ್ಮಾಯಿ
ಇನ್ನು ಈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಡಿಜಿ-ಐಜಿಪಿ ಸೂದ್​, ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ಮಾಹಿತಿ ಪಡೆದಿದ್ದಾರೆ.

ನಿನ್ನೆ ರಾತ್ರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com