ಅಂಜನಾದ್ರಿಯಲ್ಲಿ ಅನ್ಯಮತೀಯರ ವ್ಯಾಪಾರ-ವಹಿವಾಟು ನಿಷೇಧಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ!

ಹನುಮಂತನ ಜನ್ಮಸ್ಥಳವಾದ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಹಿಂದೂಯೇತರ ವ್ಯಾಪಾರಿಗಳು ವ್ಯಾಪಾರ ನಡೆಸುವುದನ್ನು ನಿಷೇಧಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.
ದೇವಾಲಯದ ಬಳಿ ಪೋಸ್ಟರ್ ಕಂಡು ಬಂದಿರುವುದು.
ದೇವಾಲಯದ ಬಳಿ ಪೋಸ್ಟರ್ ಕಂಡು ಬಂದಿರುವುದು.

ಕೊಪ್ಪಳ: ಹನುಮಂತನ ಜನ್ಮಸ್ಥಳವಾದ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಹಿಂದೂಯೇತರ ವ್ಯಾಪಾರಿಗಳು ವ್ಯಾಪಾರ ನಡೆಸುವುದನ್ನು ನಿಷೇಧಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.

ಈ ಬಗ್ಗೆ ಹಿಂದೂಪರ ಸಂಘಟನೆಗಳು ಈಗಾಗಲೇ ಹಲವು ಬಾರಿ ಮನವಿಗಳನ್ನು ಮಾಡಿವೆ. ಆದರೆ, ಆಡಳಿತ ಮಂಡಳಿಗಳು ಮಾತ್ರ ಈ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಹಿಂದೂಯೇತರ ವ್ಯಾಪಾರಿಗಳ ನಿಷೇಧಿಸುವಂತೆ ದೇವಾಲಯದ ಬಳಿ ಭಿತ್ತಿಪತ್ರಗಳು ಕಂಡು ಬಂದಿವೆ. ಕಳೆದ ವರ್ಷ ಕೂಡ ಇದೇ ವೇದಿಕೆಯೂ ಇದೇ ಆಗ್ರಹಗಳನ್ನು ವ್ಯಕ್ತಪಡಿಸಿತ್ತು. ದೇವಸ್ಥಾನದ ಆವರಣದಲ್ಲಿ ಹಿಂದೂಯೇತರ ವ್ಯಾಪಾರಿಗಳು ವ್ಯಾಪಾರ ಮಾಡುವುದನ್ನು ನಿಷೇಧಿಸುವ ಕರ್ನಾಟಕ ದತ್ತಿ ಕಾಯಿದೆಯಲ್ಲಿನ ಷರತ್ತಿನ ಕುರಿತು ವೇದಿಕೆಯು ದನಿ ಎತ್ತಿದೆ.

ಕಾಯ್ದೆಯಲ್ಲಿರುವ ಅಂಶಗಳ ಕುರಿತು ನಾವು ಒತ್ತಾಯಿಸುತ್ತಿದ್ದೇವೆ. ಇತ್ತೀಚೆಗೆ ಕೆಲವರನ್ನು ಬಂಧಕ್ಕೊಳಪಡಿಸಿರುವುದು ಹಾಗೂ ತನಿಖೆಯಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಲು ಸಂಚು ರೂಪಿಸಿರುವುದು ಸಾಬೀತಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಹಿಂದೂ ದೇಗುಲಗಳಲ್ಲಿ ಹಿಂದೂಯೇತರ ವ್ಯಾಪಾರಿಗಳು ವ್ಯಾಪಾರ ಮಾಡುವುದನ್ನು ನಿಷೇಧಿಸುವುದು ಮುಖ್ಯವಾಗಿದೆ. ಅಂಜನಾದ್ರಿಯಲ್ಲೂ ಬೇಡಿಕೆ ಇಡುತ್ತಿದ್ದೇವೆಂದು ಗಂಗಾವತಿಯ ಹಿಂದೂ ಜಾಗರಣ ವೇದಿಕೆಯ ಮುಖಂಡ ಶ್ರೀಕಾಂತ್ ಅವರು ಹೇಳಿದ್ದಾರೆ.

ಹನುಮಂತನ ಮಾಲೆಯನ್ನು ಧರಿಸುವ ಹೆಚ್ಚಿನ ಸಂಖ್ಯೆಯ ಭಕ್ತರು ಇನ್ನು ಕೆಲವು ವಾರಗಳಲ್ಲಿ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ದೇಗುಲದಲ್ಲಿ ಅಪಾರ ಪ್ರಮಾಣದ ಹೂವುಗಳನ್ನು ಮಾರಾಟ ಮಾಡಲಾಗುತ್ತದೆ ಮತ್ತು ಹೆಚ್ಚಿನ ವ್ಯಾಪಾರಿಗಳು ಹಿಂದೂಯೇತರರಾಗಿದ್ದಾರೆ. ಹಿಂದೂಯೇತರ ವ್ಯಾಪಾರಸ್ಥರ ಮೇಲೆ ನಿಷೇಧ ಹೇರಿದರೆ ಹೂವು, ಹಾರಗಳ ಬೆಲೆ ಹೆಚ್ಚಾಗಬಹುದು ಎಂದು ಅಂಜನಾದ್ರಿಯಲ್ಲಿ ವ್ಯಾಪಾರ ಮಾಡುತ್ತಿರುವ ಹಿಂದೂಯೇತರ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ಈ ನಡುವೆ ಕೆಲವು ಸ್ಥಳೀಯ ಹಿಂದೂಯೇತರ ಮಾರಾಟಗಾರರು ಪ್ರತಿಭಟನೆ ಅಂತ್ಯಗೊಳ್ಳುವವರೆಗೂ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲವು ಮುಸ್ಲಿಂ ವ್ಯಾಪಾರಿಗಳು ಇದೀಗ ದೇಗುಲದಿಂದ ದೂರದಲ್ಲಿ ತಮ್ಮ ಅಂಗಡಿಗಳನ್ನು ಹಾಕಲು ಯೋಜಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

"ಕಳೆದ ವರ್ಷವೂ ಇದೇ ರೀತಿಯ ಪ್ರತಿಭಟನೆಗಳು ವ್ಯಕ್ತವಾಗಿದ್ದವು, ಆದರೆ, ಅದಾವುದನ್ನೂ ಅಧಿಕಾರಿಗಳು ಪ್ರೋತ್ಸಾಹಿಸಿರಲಿಲ್ಲ. ಧರ್ಮದ ಆಧಾರದ ಮೇಲೆ ಯಾವುದೇ ದೇವಸ್ಥಾನದ ಸುತ್ತ ವ್ಯವಹಾರವನ್ನು ವಿಭಜಿಸಲು ಸಾಧ್ಯವಿಲ್ಲ. ಇಲ್ಲಿ ಹಿಂದೂಯೇತರ ಸಮುದಾಯದ ಅನೇಕ ವ್ಯಾಪಾರಿಗಳಿದ್ದಾರೆ’ ಎಂದು ಕೊಪ್ಪಳದ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com