ಬೆಂಗಳೂರು: ಕೆ.ಆರ್. ಮಾರುಕಟ್ಟೆಯ ಪಾದಚಾರಿ ಸುರಂಗ ಮಾರ್ಗ ಬಳಕೆಗೆ ಮುಕ್ತ
ಬೆಂಗಳೂರು: ನಗರದ ಜನನಿಬಿಡ ಪ್ರದೇಶ ಕೆ.ಆರ್. ಮಾರುಕಟ್ಟೆಯ ಬಹುನಿರೀಕ್ಷಿತ ನೂತನ ಸಬ್ ವೇ (ಪಾದಚಾರಿ ಸುರಂಗ ಮಾರ್ಗ) ಯೋಜನೆಯನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಪೂರ್ಣಗೊಳಿಸಿದ್ದು, ಈ ಜಂಕ್ಷನ್ ನಲ್ಲಿನ ಪರಿಸ್ಥಿತಿಯನ್ನು ಸುಧಾರಿಸಿದೆ.
ಈ ಸಬ್ ವೇ ಆರು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದುವ ಮೂಲಕ ಅವ್ಯಾಹತವಾಗಿ ನಡೆಯುತ್ತಿದ್ದ ಪಿಕ್ ಪಾಕೆಟಿಂಗ್, ಸರಗಳ್ಳತನ ಮತ್ತಿತರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಇಡೀ ಪ್ರದೇಶದ ಸುತ್ತಮುತ್ತ ಎಲ್ ಇಡಿ ದೀಪಗಳೊಂದಿಗೆ 32 ಸಿಸಿಟಿವಿಗಳನ್ನು ಹಾಕಲಾಗಿದೆ. ಎಸ್ಕಾಲೇಟರ್ ಕೂಡಾ ಅಳವಡಿಸಲಾಗಿದೆ.
ಕೆ.ಆರ್. ಮಾರುಕಟ್ಟೆ ಜಂಕ್ಷನ್ ಮತ್ತು ಸಬ್ ವೇ ಯೋಜನೆಯನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಸಬ್ ವೇ ನಲ್ಲಿ ನೀರು ಸೊರುತಿತ್ತು. ಮೇಲ್ಭಾಗ ಮತ್ತು ಗೋಡೆಯ ಕಾಂಕ್ರಿಟ್ ಕೆಲಸವನ್ನು ಮಾಡಲಾಗಿದೆ. ಕೇಬಲ್ ನೇಟ್ ವರ್ಕ್ ಕೆಲಸವನ್ನು ಮರುವಿನ್ಯಾಸಗೊಳಿಸಲಾಗಿದೆ. ಗ್ರಾನೈಟ್ ಅಳವಡಿಕೆ ಕಾರ್ಯ ಕೂಡಾ ಮುಗಿದಿದೆ. ಸಬ್ ವೇ ಎರಡು ಬದಿಗಳಲ್ಲಿ ಸಣ್ಣದಾದ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರೀ ಮಳೆಯಾದಾಗ ನೀರು ಸಂಗ್ರಹ ಕೇಂದ್ರಕ್ಕೆ ಹರಿದು ಹೋಗಲಿದೆ. ನಂತರ ಅಲ್ಲಿಂದ ಪಂಪ್ ಮಾಡಲಾಗುತ್ತದೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಎನ್. ಚಂದ್ರಶೇಖರ್ ವಿವರಿಸಿದರು.
ವಿದ್ಯುತ್ ಅಡಚಣೆ ತಡೆಗೆ ಡಿಜಿ ಸೆಟ್ ಅಳವಡಿಸಲಾಗಿದೆ. ಈ ಯೋಜನೆಯಡಿ ಕೆ.ಆರ್.ಮಾರುಕಟ್ಟೆಯಲ್ಲಿ ಬಸ್ ನಿಲ್ದಾಣಗಳ ಅಭಿವೃದ್ಧಿ, ಉತ್ತಮವಾದ ದೀಪಾಲಂಕಾರ ಮತ್ತು ಸೂಚನಾ ಫಲಕಗಳನ್ನು ಯೋಜನೆಯಡಿ ಮಾಡಲಾಗಿದೆ. 18 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲಾಗಿದೆ. ಕೆಲವೊಂದು ಕೆಲಸಗಳು ಬಾಕಿ ಉಳಿದಿದ್ದು, ಬರುವ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಯೋಜನೆ ಉದ್ಘಾಟನೆಗೆ ಕಾಯುತ್ತಿದ್ದೇವೆ ಆದರೆ, ಸಾರ್ವಜನಿಕರು ರಸ್ತೆಗೆ ಬರುವುದನ್ನು ತಡೆಯಲು ಸಬ್ ವೇ ತೆರೆಯುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸೂಚಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ