ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್ ಕಡಿವಾಣಕ್ಕೆ ಕ್ರಮ: ಜಿಪಿಎಸ್ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರ ಮುಂದು!

ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಮೈಸೂರಿನಲ್ಲಿ ಸಚಿವ ಡಾ.ಕೆ.ಸುಧಾಕರ್
ಮೈಸೂರಿನಲ್ಲಿ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. 

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಮೈಸೂರು ವಿಭಾಗದಲ್ಲಿ 6 ವೈದ್ಯಕೀಯ ಕಾಲೇಜುಗಳಿವೆ. ಈ ವ್ಯಾಪ್ತಿಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಇದೇ ಸಮಯದಲ್ಲಿ ಬೇರೆ ಕಡೆ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ದೂರುಗಳಿವೆ. ಮುಖ್ಯವಾಗಿ, ಸರ್ಕಾರಿ ವೈದ್ಯರು ಬೇರೆ ಕಡೆ ಅಂದರೆ ಕ್ಲಿನಿಕ್​​ನಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಹಾಗಾಗಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಹೇಳಿದರು.

ಇದರೊಂದಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ ಕುರಿತು ಚರ್ಚಿಸಲಾಗಿದ್ದು, ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವುದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುವುದು. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಬಡ ರೋಗಿಗಳ ಸೇವೆ ಮಾಡಬೇಕು. ಹಾಗೆಂದು ಖಾಸಗಿ ಪ್ರಾಕ್ಟೀಸ್ ವಿರುದ್ಧ ಸರ್ಕಾರವಿಲ್ಲ. ಸರ್ಕಾರಿ ವೈದ್ಯರು ತಮ್ಮ ಕೆಲಸದ ಅವಧಿ ಮುಗಿದ ನಂತರ ಬೇಕಿದ್ದರೆ ಖಾಸಗಿಯಾಗಿ ಪ್ರಾಕ್ಟೀಸ್ ಮಾಡಬಹುದು. ಈ ನಿಟ್ಟಿನಲ್ಲಿ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸರಕಾರಿ ವೈದ್ಯರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

2030 ರ ವೇಳೆಗೆ ಕ್ಷಯ ರೋಗ ಮುಕ್ತ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ನಮ್ಮ ಕರ್ನಾಟಕ 2025 ಒಳಗೆ ಕ್ಷಯ ರೋಗ ಮುಕ್ತ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್ ಸ್ಥಾಪನೆಗೆ ಮುಂದಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್​ ಅನ್ನು ನವೆಂಬರ್ 8ರೊಳಗೆ ಪ್ರಾರಂಭಿಸಲಾಗುವುದು ಎಂದರು.

128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು ರಾಜ್ಯದ ವಿವಿಧೆಡೆ ಸ್ಥಾಪಿಸಲಾಗುವುದು. ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಹೆಚ್ಚಾಗಿದೆ. ಇದನ್ನು ನೀಗಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಮೈಸೂರಿನಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ರೂ.101 ಕೋಟಿ ಅವಶ್ಯಕತೆ ಇದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೊದಲ ಹಂತದಲ್ಲಿ ರೂ.50 ಕೋಟಿ ಬಿಡುಗಡೆ ಮಾಡುತ್ತೇವೆ. ನಂತರ ಸುಸಜ್ಜಿತವಾದ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಕೆಲಸ ಆರಂಭಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಸರ್ಕಾರದ ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್‌ನ ಮಾಜಿ ಮಹಿಳಾ ಉಸ್ತುವಾರಿ ಡಾ ಚಿಮನ್ಯೀಗೌಡ, “ಕೆಲವು ವೈದ್ಯರು ಮಾಡಿದ ತಪ್ಪಿನ ಪರಿಣಾಮವನ್ನು ಎಲ್ಲಾ ವೈದ್ಯರು ಎದುರಿಸಲು ಸಾಧ್ಯವಿಲ್ಲ. ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ವೈದ್ಯರ ಕರ್ತವ್ಯವಾಗಿದೆ. ಜಿಪಿಎಸ್ ಅಳವಡಿಕೆ ನಮ್ಮ ಖಾಸಗಿತನವನ್ನು ಕಸಿದುಕೊಂಡಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಸರ್ಕಾರಿ ವೈದ್ಯರಿಗೆ ವೇತನ ಪ್ರಮಾಣವು ತುಂಬಾ ಕಡಿಮೆಯಾಗಿದೆ, ಹೀಗಾಗಿ ವೈದ್ಯರು ಖಾಸಗಿ ಉದ್ಯೋಗಗಳನ್ನು ಮಾಡುವಂತಾಗಿದೆ. ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರ ಸಂಖ್ಯೆಯಲ್ಲಿ ಕೊರತೆಯಿದ್ದು, ಸರ್ಕಾರ ಈ ನಡೆ ಮತ್ತಷ್ಟು ಕೊರತೆ ಎದುರಾಗುವಂತೆ ಮಾಡಲಿದೆ ಎಂದು ಹೇಳಿದರು. 

ಕರ್ನಾಟಕ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್‌ಡಿ) ಅಧ್ಯಕ್ಷ ತೇಜಸ್ ಎಸ್ ಮಾತನಾಡಿ, “ಕರ್ನಾಟಕದಲ್ಲಿ ಸರ್ಕಾರಿ ವೈದ್ಯರಿಗೆ ಕಡಿಮೆ ವೇತನವಿದೆ, ಆದ್ದರಿಂದ ಕೆಲವು ವೈದ್ಯರು ತಮ್ಮ ಕರ್ತವ್ಯದ ಅವಧಿಯ ನಂತರ ಖಾಸಗಿ ಕ್ಲಿನಿಕ್‌ಗಳಲ್ಲಿ ಕೆಲಸ ಮಾಡುತ್ತಾರೆ. ವೈದ್ಯರ ಮೇಲೆ ಸಂಪೂರ್ಣ ನಿಷೇಧವು ಪ್ರಯೋಜನಕಾರಿಯಾಗುವುದಿಲ್ಲ. ಕೆಲವು ವೈದ್ಯರು ಮಾತ್ರ ನಿಯಮಗಳನ್ನು ಉಲ್ಲಂಘಿಸುತ್ತಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com