ಸತತ 20 ದಿನ ಜೀವನ್ಮರಣ ಹೋರಾಟ ನಡೆಸಿ ಜಾನಪದ ಕಲಾವಿದ ನರಸಿಂಹ ಮೂರ್ತಿ ನಿಧನ!

ಧರೆಗುರುಳುತ್ತಿದ್ದ ಮರದ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಜಾನಪದ ಕಲಾವಿದ ಹಾಗೂ ಹಾರ್ಮೋನಿಯಂ ವಾದಕ ನರಸಿಂಹ ಮೂರ್ತಿ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ನರಸಿಂಹ ಮೂರ್ತಿ
ನರಸಿಂಹ ಮೂರ್ತಿ

ಬೆಂಗಳೂರು: ಧರೆಗುರುಳುತ್ತಿದ್ದ ಮರದ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಜಾನಪದ ಕಲಾವಿದ ಹಾಗೂ ಹಾರ್ಮೋನಿಯಂ ವಾದಕ ನರಸಿಂಹ ಮೂರ್ತಿ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.

ಅಕ್ಟೋಬರ್ 12 ರಂದು ದುರ್ಘಟನೆಯೊಂದು ಹೆಸರಘಟ್ಟದಲ್ಲಿ ಸಂಭವಿಸಿತ್ತು. ದ್ವಿಚಕ್ರ ವಾಹನದಲ್ಲಿ ನರಸಿಂಹ ಮೂರ್ತಿಯವರು ಮನೆಗೆ ತೆರಳುತ್ತಿದ್ದಾಗ ಧರೆಗುರುಳುತ್ತಿದ್ದ ಮರದ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ನರಸಿಂಹ ಮೂರ್ತಿಯವರನ್ನು ಫ್ರೇಜರ್ ಟೌನ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಸ್ಪತ್ರೆಯಲ್ಲಿ ಸತತ 20 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಮೂರ್ತಿಯವರು ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಂಬಂಧಿ ರಘು ಮಾತನಾಡಿ, ಮೂರ್ತಿಯವರು ಕಾರ್ಯಕ್ರಮಗಳು, ಗ್ರಾಮಗಳ ಜಾತ್ರೆ, ದೇವಸ್ಥಾನಗಳಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾಗಿದೆ. ದುರ್ಘಟನೆ ಸಂಭವಿಸಿದ್ದರೂ, ಹೆಸರಘಟ್ಟ ಗ್ರಾಮ ಪಂಚಾಯಿತಿಗಾಗಲಿ, ಶಾಸಕರ ಕಚೇರಿಗಾಗಲಿ ಈ ಬಗ್ಗೆ ಮಾಹಿತಿಯಿಲ್ಲ. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದರು.

ನರಸಿಂಹ ಮೂರ್ತಿಯವರಿಗೆ ಚಿಕಿತ್ಸೆ ನೀಡಿದ ಡಾ ಸಂತೋಷ್ ಎಸ್ ಮಾತನಾಡಿ, ರಾಜಾಜಿನಗರದ ಇಎಸ್ಐ ಆಸ್ಪತ್ರೆ ಶಿಫಾರಸ್ಸಿನ ಮೇರೆಗೆ ರೋಗಿ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಗೆ ರೋಗಿಬಂದಾಗ ಆಘಾತಕ್ಕೊಳಗಾಗಿದ್ದರು. ಕೈಕಾಲುಗಳು ಚಲನರಹಿತವಾಗಿದ್ದವು. ಹೃದಯ ಸ್ತಂಭನವಾಗಿತ್ತು. ಕಳೆದ 8 ದಿನಗಳಿಂದ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು. ಶನಿವಾರ ಸಂಜೆ ಕುಟುಂಬಸ್ಥರು ಡಿಸ್ಚಾರ್ಚ್ ಮಾಡಿಸಿಕೊಂಡು ಹೋಗಿದ್ದರು. ಆಸ್ಪತ್ರೆಯಿಂದ ಕರೆದುಕೊಂಡು ಹೋದ ಗಂಟೆಗಳಲ್ಲಿ ಮೂರ್ತಿಯವರು ಕೊನೆಯುಸಿರೆಳೆದಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com