ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶ್ರೀ ಬಂಧನ, ಮಠದಿಂದಲೇ ಕರೆದೊಯ್ದ ಪೊಲೀಸರು!

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಮುರುಘಾ ಶ್ರೀಗಳ ಬಂಧನ (ಸಂಗ್ರಹ ಚಿತ್ರ)
ಮುರುಘಾ ಶ್ರೀಗಳ ಬಂಧನ (ಸಂಗ್ರಹ ಚಿತ್ರ)

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಹೌದು.. ಮಠದ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ 6 ದಿನಗಳ ಬಳಿಕ ಇದೀಗ ಚಿತ್ರದುರ್ಗ ಪೊಲೀಸರು ಡಾ.ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿದ್ದಾರೆ. ಕಳೆದ ಆಗಸ್ಟ್ 26ರಂದು ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥರು ದೂರು ದಾಖಲಿಸಿದ್ದರು. 

ಮೈಸೂರು ಪೊಲೀಸರು ಈ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾಯಿಸಿದ್ದರು. ಇದೀಗ ಪೊಲೀಸರು ಶ್ರೀಗಳನ್ನು ಬಂಧಿಸಿದ್ದು, ಸಿಪಿಐ ಬಾಲಚಂದ್ರ ನಾಯಕ್, ಸಿಪಿಐ ಸತೀಶ್ ಚಂದ್ರನ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇಂದು ಎ-2 ಆರೋಪಿ ರಶ್ಮಿ ಅವರನ್ನು ವಿಚಾರಣೆ ನಡೆದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾದ 6 ದಿನದ ಬಳಿಕ  ಶ್ರೀಗಳನ್ನು ಬಂಧನ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, 'ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶ್ರೀ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಬಂಧನವಾಗಿದೆ. ನಿಗದಿತ ಕ್ರಮ ಅನುಸರಿಸಲಾಗುವುದು. ಕಾರ್ಯವಿಧಾನದ ಪ್ರಕಾರ ವೈದ್ಯಕೀಯ ಪರೀಕ್ಷೆ ಮತ್ತು ತನಿಖೆಯನ್ನು ಮಾಡಲಾಗುತ್ತದೆ. ಅವರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.

ಸ್ವಯಂ ಪ್ರೇರಿತ ಶರಣಾಗತಿ
ಬಂಧನವನ್ನು ದೃಢಪಡಿಸಿದ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಮುರುಘಾ ಶ್ರೀಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಂತೆಯೇ ಇದೇ ವಿಚಾರವಾಗಿ ಮಾತನಾಡಿರುವ ವೈದ್ಯಕೀಯ ಅಧೀಕ್ಷಕ ಡಾ.ಪಾಲಾಕ್ಷಪ್ಪ ಅವರು, ಡಾ.ಶಿವಮೂರ್ತಿ ಮುರುಘಾ ಶರಣರು ಪೊಲೀಸರ ಮುಂದೆ ಸ್ವಯಂಪ್ರೇರಿತರಾಗಿ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್‌ ನಿರೀಕ್ಷಕ ಬಾಲಚಂದ್ರ ನಾಯ್ಕ್‌, ಮೊಳಕಾಲ್ಮೂರು ಪೊಲೀಸ್‌ ಇನ್‌ಸ್ಪೆಕ್ಟರ್‌ ಸತೀಶ್‌ ಅವರೊಂದಿಗೆ ಪೊಲೀಸ್‌ ಸಿಬ್ಬಂದಿ ಶ್ರೀಗಳ ಬಂಧನ ಕಾರ್ಯ ನಡೆಸಿದರು.

ಸರಳ ವಸ್ತ್ರಗಳನ್ನು ಧರಿಸಿದ್ದ ಪೊಲೀಸರು ಡಾ.ಶಿವಮೂರ್ತಿ ಮುರುಘಾ ಶರಣರನ್ನು ಮಠದಲ್ಲಿ ಬಂಧಿಸಿ ಆವರಣದ ಹಿಂಬಾಗಿಲಿನಿಂದ ಹೊರಕ್ಕೆ ಕರೆದೊಯ್ದು ನಂತರ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ಮೊದಲಿಗೆ ಅವರನ್ನು ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ನಂತರ ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಯೋಜಿಸಲಾಗಿತ್ತು. ಬಳಿಕ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ಜಿಲ್ಲೆಯಾದ್ಯಂತ ವ್ಯಾಪಕ ಭದ್ರತೆ
ಇನ್ನು ಶ್ರೀಗಳ ಬಂಧನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬ್ಯಾರಿಕೇಡ್‌ ಇರುವ ಜೊತೆಗೆ ಎಲ್ಲ ಕಡೆಯೂ ಬಿಗಿ ಬಂದೋಬಸ್ತ್‌ ಮಾಡಲಾಗುತ್ತಿದೆ. ಹೆಚ್ಚಿನ ಭದ್ರತೆಯಾಗಿ ದಾವಣಗೆರೆಯಿಂದ ಸಿಪಿಐ ಮತ್ತು ಮೇಲಿನ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. 

ಸದ್ಯ ಲೈಂಗಿಕ ದೌರ್ಜನ್ಯ ಆರೋಪ, ಪೋಕ್ಸೊ ಪ್ರಕರಣ ಎದುರಿಸುತ್ತಿರುವ ಮುರುಘಾ ಶ್ರೀಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ಈಗಾಗಲೇ ಶುಕ್ರವಾರಕ್ಕೆ ಮುಂದೂಡಿದೆ. ನಾಳೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್‌ ಅವಕಾಶ ನೀಡಿದೆ. ಈ ಸಂಬಂಧ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com