ಬೆಂಗಳೂರಿನ ಇತಿಹಾಸದಲ್ಲಿ ದೋಣಿಯಲ್ಲಿ ಸಾಗುವ ಸ್ಥಿತಿ ನಿರ್ಮಾಣವಾಗಿರಲಿಲ್ಲ: ಸಿದ್ದರಾಮಯ್ಯ

ಬೆಂಗಳೂರಿನ ಇತಿಹಾಸದಲ್ಲಿ ದೋಣಿಯಲ್ಲಿ ಸಾಗುವ ಪರಿಸ್ಥಿತಿ ಯಾವಾಗಲೂ ನಿರ್ಮಾಣವಾಗಿರಲಿಲ್ಲ. ಈಗ ಇದು ಸಾಧ್ಯವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮತ್ತಿತರರು
ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮತ್ತಿತರರು

ಬೆಂಗಳೂರು: ಬೆಂಗಳೂರಿನ ಇತಿಹಾಸದಲ್ಲಿ ದೋಣಿಯಲ್ಲಿ ಸಾಗುವ ಪರಿಸ್ಥಿತಿ ಯಾವಾಗಲೂ ನಿರ್ಮಾಣವಾಗಿರಲಿಲ್ಲ. ಈಗ ಇದು ಸಾಧ್ಯವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ಅವರು, ನಿನ್ನೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಅನೇಕ ಬಡವಾಣೆಗಳಲ್ಲಿ ನೀರು ಮನೆಗೆ ನುಗ್ಗಿದ್ದು ಜನ ಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರದೇಶಗಳಲ್ಲಿ ಒಬ್ಬರೂ ವಾಸಿಸುತ್ತಿಲ್ಲ. 5-6 ಅಡಿ ಮಳೆ ನೀರು ನಿಂತಿತ್ತು ಎಂದರು.

ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಆಗಿರುವ ಅನಾಹುತಕ್ಕೆ ಹಿಂದಿನ ಸರ್ಕಾರ ಕಾರಣ ಎಂದಿದ್ದಾರೆ. ಇದಕ್ಕೆ ನಾವು ಹೇಗೆ ಕಾರಣ? ಪ್ರವಾಹ ಬಂದರೆ ಅದರಿಂದಾಗುವ ದುಷ್ಪರಿಣಾಮ ಎದುರಿಸಲು ಕಳೆದ 3 ವರ್ಷಗಳಿಂದ ಈ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಮುಖ್ಯಮಂತ್ರಿಗಳು ತಿಳಿಸಬೇಕು ಎಂದು ಒತ್ತಾಯಿಸಿದರು. 

2006ರಿಂದ 2022ರವರೆಗೆ 16 ವರ್ಷಗಳ ಅವಧಿಯಲ್ಲಿ ಬಿಜೆಪಿ ಹೆಚ್ಚು ಆಡಳಿತ ನಡೆಸಿದೆ. ಕೆರೆಗಳ ಹೂಳು ಎತ್ತದೇ ಇರುವುದು, ಕೆರೆಗಳ ಸಂಪರ್ಕ ಇಲ್ಲದಿರುವುದು, ರಾಜಕಾಲುವೆ ಒತ್ತುವರಿ ತೆರವು ಹಾಗೂ ಸ್ವಚ್ಛಗೊಳಿಸದೇ ಇರುವುದು ಈ ಪ್ರವಾಹಕ್ಕೆ ಪ್ರಮುಖ ಕಾರಣ. ನಮ್ಮ ಸರ್ಕಾರ ಇದ್ದಾಗ ಸಮೀಕ್ಷೆ ನಡೆಸಿ, ಒತ್ತುವರಿ ಪ್ರದೇಶ ಗುರುತಿಸಲಾಗಿತ್ತು. ಆಗ ಒಟ್ಟು 1953 ಒತ್ತುವರಿ ಪ್ರದೇಶಗಳಿದ್ದವು. ಅದರಲ್ಲಿ 1300 ಒತ್ತುವರಿ ತೆರವುಗೊಳಿಸಿದ್ದೆವು. ಇನ್ನು 653 ಒತ್ತುವರಿ ತೆರೆವಾಗಿರಲಿಲ್ಲ. ಅಷ್ಟರಲ್ಲಿ ಸರ್ಕಾರ ಪತನವಾಯಿತು. ನಂತರ ಕುಮಾರಸ್ವಾಮಿ ಹಾಗೂ ಬಿಜೆಪಿ ಸರ್ಕಾರ ಬಂದಿತ್ತು. ಇವರು ಒತ್ತುವರಿ ತೆರವು ಕಾರ್ಯ, ಕೆರೆ ಹೂಳು ಎತ್ತುವ ಕೆಲಸ ಮಾಡಲಿಲ್ಲ ಯಾಕೆ? ಈ ಕಾರಣಕ್ಕೆ ಇಂದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಈಗ ಇದಕ್ಕೆ ಕಾರಣ ಯಾರು? ಹೆಚ್ಚು ಅಧಿಕಾರ ಮಾಡಿರುವವರು ಬಿಜೆಪಿಯವರೇ. ಪ್ರವಾಹ ಪೀಡಿತ ಕ್ಷೇತ್ರಗಳಲ್ಲಿ ಇರುವ ಶಾಸಕರೂ ಬಿಜೆಪಿಯವರೆ. ಇವರೆಲ್ಲ ಎಷ್ಟು ವರ್ಷಗಳಿಂದ ಶಾಸಕರಾಗಿದ್ದಾರೆ? ಇವರೆಲ್ಲ ಏನು ಮಾಡುತ್ತಿದ್ದಾರೆ? ಈಗ ಇವರು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಕಡೆ ಬೆಟ್ಟು ಮಾಡುತ್ತಿದ್ದಾರೆ. ಇವರು ಹಣ ಬಿಡುಗಡೆ ಮಾಡಿರುವುದಾಗಿ ಹೇಳುತ್ತಾರೆ. ಆದರೆ ಕಾರ್ಯ ಯೋಜನೆ ಅನುಷ್ಠಾನ ಮಾಡಿಲ್ಲ. ಇಂತಹ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಕಾರಣ. ಬಿಜೆಪಿಯ  ಮೂವರು ಸಂಸದರಿದ್ದಾರೆ. ಅವರ ಕೆಲಸ ಏನು? ಶಾಸಕರ ಕೆಲಸ ಏನು? ಕಳೆದ ಬಾರಿ 100 ಪಾಲಿಕೆ ಸದಸ್ಯರಿದ್ದರು ಅವರ ಕೆಲಸ ಏನು? ನಮ್ಮ ಮೇಲೆ ಆರೋಪ ಹೊರಿಸಿ ನಿಮ್ಮ ಲೋಪ ಮುಚ್ಚಿಕೊಳ್ಳುತ್ತಿರುವುದನ್ನು ಬೆಂಗಳೂರಿನ ಜನ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.

ಈ ಸರ್ಕಾರಕ್ಕೆ ಯಾವುದೇ ದೂರದೃಷ್ಟಿ ಇಲ್ಲ. ಹೀಗಾಗಿ ನಮ್ಮ ಪಕ್ಷ ಒಂದು ಸಮಿತಿ ಮಾಡಿದೆ. ಪ್ರವಾಹದಿಂದ ಆಗಿರುವ ನಷ್ಟಗಳಿಗೆ ಪರಿಹಾರ ನೀಡುವವರು ಯಾರು? ಪ್ರವಾಹದಿಂದ ಒಂದು ಹುಡುಗಿ ಸತ್ತಿದ್ದರೂ ಇದುವರೆಗೂ ಪರಿಹಾರ ನೀಡಿಲ್ಲ. ನಾನು ಕಮಿಷನರ್ ಕರೆ ಮಾಡಿದಾಗ ವಿದ್ಯುತ್ ಸಂಸ್ಥೆ ನೀಡಬೇಕು ಎಂದು ಸಬೂಬು ಹೇಳುತ್ತಾರೆ. ಈ ಸರ್ಕಾರದ ನಿರ್ಲಕ್ಷ್ಯ ಬೇಜವಾಬ್ದಾರಿತನ, ಭ್ರಷ್ಟಾಚಾರದಿಂದ ನಗರದಲ್ಲಿ ಇಂದು ನರಕ ಪರಿಸ್ಥಿತಿ ಸೃಷ್ಟಿಯಾಗಿದೆ. ಜನ ಹೊಟೇಲ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅನೇಕರಿಗೆ ಆಹಾರ ಇಲ್ಲವಾಗಿದೆ. ಇದಕ್ಕೆಲ್ಲ ಬಿಜೆಪಿ ನೇರ ಹೊಣೆ. ಪ್ರವಾಹ ಪರಿಸ್ಥಿತಿ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಲಿ. ಅಧಿವೇಶನದಲ್ಲಿ ನಾನು ಈ ವಿಚಾರ ಪ್ರಸ್ತಾಪಿಸುತ್ತೇನೆ, ಸರ್ಕಾರದ ಗಮನ ಸೆಳೆಯುತ್ತೇನೆ. ಅವರ ವೈಫಲ್ಯ, ಬೇಜವಾಬ್ದಾರಿತನವನ್ನು ತೋರಿಸುತ್ತೇನೆ ಎಂದರು.

ಇವರು ಜನರ ರಕ್ಷಿಸದಿದ್ದರೆ ಅಧಿಕಾರದಲ್ಲಿ ಯಾಕೆ ಇರಬೇಕು? ನಾವು ವಿಧಾನಸೌಧದ ಒಳಗೆ ಹಾಗೂ ಹೊರಗೆ ಇವರ ಭ್ರಷ್ಟಾಚಾರ ಹಾಗೂ ವೈಫಲ್ಯದ ವಿರುದ್ಧ ಹೋರಾಡುತ್ತೇವೆ. ಸರ್ಕಾರ ಕೂಡಲೇ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com