ಬೆಂಗಳೂರು: ಮಾಗಡಿ ರಸ್ತೆ ಮೆಟ್ರೋ ನಿಲ್ದಾಣ ಕಡೆಗೆ ಹೋಗಲು ರೈಲಿಗಾಗಿ ಕಾಯುತ್ತಿದ್ದ ಇಪ್ಪತ್ತರ ಹರೆಯದ ಯುವತಿಯೊಬ್ಬಳು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ ಎರಡರಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕೆಲಸ ಮುಗಿಸಿಕೊಂಡು ತನ್ನ ಸಹೋದ್ಯೋಗಿಗಳೊಂದಿಗೆ ಮನೆಗೆ ಹಿಂತಿರುಗುತ್ತಿದ್ದ ಮಹಿಳೆ ರಾತ್ರಿ 7-30ರ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಕೆಯ ರಕ್ತದೊತ್ತಡ ತುಂಬಾ ಕಡಿಮೆಯಾಯಿತು ಮತ್ತು ಆಕೆ ನಡುಗುತ್ತಿದ್ದಳು. ಇದರಿಂದ ಗಾಬರಿಗೊಂಡ ಆಕೆಯ ಜೊತೆಗಿದ್ದವರು ಕೈ, ಕಾಲುಗಳನ್ನು ಉಜ್ಜಿ ಯುವತಿ ಮತ್ತೆ ಪ್ರಜ್ಞೆ ಬರುವಲ್ಲಿ ನೆರವಾದರು ಎಂದು ಮೆಟ್ರೋ ಮೂಲಗಳು ತಿಳಿಸಿವೆ.
ಗದ್ದಲವನ್ನು ಗಮನಿಸಿದ ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಆಕೆಯನ್ನು ಅಲ್ಲಿಂದ ಹೊರ ತರಲು ಕ್ರಮ ಕೈಗೊಂಡರು. ಭದ್ರತಾ ಸಿಬ್ಬಂದಿ ಆಕೆಯನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ನಿಲ್ದಾಣದ ಡಿ ಪ್ರವೇಶದ್ವಾರಕ್ಕೆ ಕರೆತಂದರು. ಅಲ್ಲಿಂದ ಆಕೆಯನ್ನು ಆಟೋ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೆಟ್ರೋ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆಯ ಕಿಟ್ ಲಭ್ಯವಿದ್ದರೂ, ವೈದ್ಯರು ಅಥವಾ ಆಂಬ್ಯುಲೆನ್ಸ್ ಇರಲ್ಲ ಎಂದು ಇಲ್ಲಿನ ಪೋಲೀಸರೊಬ್ಬರು ಹೇಳಿದರು. "108 ಗೆ ಕರೆ ಮಾಡಿದೆ ಆದರೆ ಅದು ಸ್ಥಳಕ್ಕೆ ತಲುಪಲು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ ಎಂದು ಹೇಳಲಾಯಿತು. ಹೀಗಾಗಿ ಆಕೆಯನ್ನು ಆಟೋದಲ್ಲಿ ಕೂರಿಸಿಕೊಂಡು ಜೊತೆಗಿದ್ದವರ ಜೊತೆ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಿದೆವು ಎಂದು ಅವರು ತಿಳಿಸಿದರು.
Advertisement